ಬೆಂಗಳೂರು:ಪ್ರಯಾಣಿಕರಿಗೆ ಅಸಮರ್ಪಕ ಹವಾನಿಯಂತ್ರಣ ವ್ಯವಸ್ಥೆ ನೀಡಿದ್ದಕ್ಕೆ ಇಂಡಿಗೋ ಏರ್‌ಲೈನ್ಸ್ ವಿರುದ್ಧ ಇನ್ಫೋಸಿಸ್ ಮಾಜಿ ಸಿಎಫ್‌ಒ ಟಿ ವಿ ಮೋಹನ್‌ದಾಸ್ ಪೈ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 29 ರಂದು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ 'X' ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಪೈ ಅವರು, 6E 7407 ವಿಮಾನದಲ್ಲಿ ತಮಗೆ ಆದ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಅಷ್ಟೂ ಸಮಯ 6E 7407ರಲ್ಲಿ ಎಸಿ ಇಲ್ಲದೇ ಕಷ್ಟ ಆಯಿತು. ಆದರೆ ಯಾವುದೇ ಅನ್ಯ ಮಾರ್ಗವಿರಲಿಲ್ಲ. ಈ ಸಂಬಂಧ ಪ್ರತಿಭಟನೆ ಮಾಡಬೇಕಾಯಿತು. ಪ್ರತಿಭಟನೆ ನಂತರವೇ ನಮ್ಮ ಅಳಲು ಕೇಳಲಾಯಿತು. ಬಳಿಕ ಟಾರ್ಮ್ಯಾಕ್‌ನ ಜನರೇಟರ್ ಬಳಸಿ ಎಸಿ ಚಾಲನೆಗೊಳಿಸಲಾಯಿತು. ಈ ನಿಮ್ಮ ಸೇವಾ ಧೋರಣೆ ಬದಲಾಯಿಸಿಕೊಳ್ಳಿ ಎಂದು ಅವರು ಬರೆದು ಕೊಂಡಿದ್ದಾರೆ.
ಇಂಡಿಗೋ ಏರ್‌ಲೈನ್ಸ್ ಸ್ಪಷ್ಟನೆ ಹೀಗಿದೆ:ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿರುವ ಇಂಡಿ ಗೋ ಏರ್‌ಲೈನ್ಸ್, ಇದು ಎಟಿಆರ್, ಫ್ರಾಂಕೋ - ಇಟಾಲಿಯನ್ ಮಾದರಿಯದ್ದಾಗಿದ್ದು, ವಿಮಾನ ಹಾರಾಟದಲ್ಲಿರುವಾಗ ಮಾತ್ರ ಹವಾನಿಯಂತ್ರಣ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ. ವಿಮಾನದ ಇಂಜಿನ್‌ಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದ ಕಾರಣ, ವಿಮಾನ ನೆಲದ ಮೇಲಿದ್ದಾಗ ಎಸಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಹವಾನಿಯಂತ್ರಣ ವ್ಯವಸ್ಥೆಗಳು ಕೆಲಸ ಮಾಡಲು ಅಗತ್ಯವಾದ ಹೈಡ್ರಾಲಿಕ್ ಒತ್ತಡ ಲಭ್ಯವಿಲ್ಲದ ಕಾರಣ ಅದು ಕಾರ್ಯನಿರ್ವಹಿಸುವುದಿಲ್ಲ ಎಂದು ವಿವರಣೆ ನೀಡಲಾಗಿದೆ. ಅಷ್ಟೇ ಅಲ್ಲ ವ್ಯವಸ್ಥೆಯಲ್ಲಿ ಕೂಲಿಂಗ ಫ್ಯಾನ್‌ಗಳು ವಿಮಾನದ ಪ್ರೊಪೆಲ್ಲರ್ ಅನ್ನು ಅವಲಂಬಿಸಿವೆ. ಅದು ನಿಲುಗಡೆ ಆಗಿದ್ದಾಗ ತಿರುಗುವುದಿಲ್ಲ ಎಂದು ಏರ್ ಲೈನ್ಸ್ ಹೇಳಿಕೊಂಡಿದೆ.