ಮುಂಬೈ (ಮಹಾರಾಷ್ಟ್ರ) :ಮರಾಠಿ ಮೀಸಲಾತಿಗೆ ಆಗ್ರಹಿಸಿ ಸಾಮಾಜಿಕ ಕಾರ್ಯಕರ್ತ ಮನೋಜ್ ಜಾರಂಗೆ ನೇತೃತ್ವದಲ್ಲಿ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಶನಿವಾರ ಹಿಂಪಡೆಯಲಾಗಿದೆ. ಸಿಎಂ ಏಕನಾಥ್ ಶಿಂಧೆ ಅವರು ಧರಣಿ ಸ್ಥಳಕ್ಕೆ ಆಗಮಿಸಿ, ಬೇಡಿಕೆಗಳನ್ನು ಸರ್ಕಾರ ಈಡೇರಿಸಲಿದೆ ಎಂದು ಭರವಸೆ ನೀಡಿದ, ಬಳಿಕ ಹೋರಾಟವನ್ನು ಕೊನೆಗೊಳಿಸಲಾಗಿದೆ.
ಮರಾಠರಿಗೆ ಒಬಿಸಿ ಸ್ಥಾನಮಾನ ನೀಡಬೇಕು ಎಂದು 46 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಕಳೆದ 6 ತಿಂಗಳಿನಿಂದ ಮನೋಜ್ ಜಾರಂಗೆ ನೇತೃತ್ವದಲ್ಲಿ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ. ಶುಕ್ರವಾರದಿಂದ ಅವರು ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಇದರ ಬೆನ್ನಲ್ಲೇ ಸರ್ಕಾರ ಬೇಡಿಕೆಗೆ ಸ್ಪಂದಿಸಿದೆ.
ಜ್ಯೂಸ್ ಕುಡಿಸಿದ ಸಿಎಂ:ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಸಿಎಂ ಏಕನಾಥ್ ಶಿಂಧೆ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ಜಾರಂಗೆ ಅವರ ಜೊತೆ ಮಾತುಕತೆ ನಡೆಸಿದರು. ಸರ್ಕಾರ ಮರಾಠರ ಪರವಾಗಿದೆ. ಮೀಸಲಾತಿ ಕೊಡಿಸಲು ಎಲ್ಲ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು. ಬಳಿಕ ತಮ್ಮ ಕೈಯಿಂದಲೇ ಜ್ಯೂಸ್ ನೀಡುವ ಮೂಲಕ ಉಪವಾಸ ಅಂತ್ಯಗೊಳಿಸಲು ಕೋರಿದರು. ಜಾರಂಗೆ ಅವರು ಜ್ಯೂಸ್ ಸೇವಿಸಿ ಉಪವಾಸ ವಾಪಸ್ ಪಡೆದರು.
ಈ ವೇಳೆ ಮಾತನಾಡಿದ ಹೋರಾಟಗಾರ ಮನೋಜ್ ಜಾರಂಗೆ ಅವರು, ಮರಾಠ ಸಮುದಾಯವನ್ನು ಇತರ ಹಿಂದುಳಿದ ವರ್ಗಗಳ (ಒಬಿಸಿ) ವರ್ಗಕ್ಕೆ ಸೇರಿಸಲು ಮತ್ತು ಶಿಕ್ಷಣ, ಸಾಮಾಜಿಕ, ರಾಜಕೀಯ ಮೀಸಲಾತಿ ನೀಡುವ ಬಗ್ಗೆ ಆಶ್ವಾಸನೆ ನೀಡಿದೆ. ನಮ್ಮ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿರುವುದರಿಂದ ಧರಣಿಯನ್ನು ಹಿಂಪಡೆಯುತ್ತಿರುವುದಾಗಿ ಘೋಷಿಸಿದರು.