ಥಾಣೆ (ಮಹಾರಾಷ್ಟ್ರ):ಭಾರತೀಯ ಜನತಾ ಪಕ್ಷದ ಶಾಸಕ ಗಣಪತ್ ಗಾಯಕ್ವಾಡ್, ಶಿವಸೇನಾ (ಏಕನಾಥ್ ಶಿಂಧೆ) ಬಣದ ನಾಯಕ ಮಹೇಶ್ ಗಾಯಕ್ವಾಡ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಥಾಣೆಯ ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿತ್ತು.
ಈ ಪ್ರಕರಣದಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತಾತ್ರೇಯ ಶಿಂಧೆ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ ಉಲ್ಲಾಸ್‌ನಗರ ಪ್ರದೇಶದ ಹಿಲ್‌ಲೈನ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಕೊಠಡಿಯೊಳಗೆ ಕಲ್ಯಾಣ್‌ನ ಶಿವಸೇನಾ ಮುಖ್ಯಸ್ಥ ಮಹೇಶ್ ಗಾಯಕ್ವಾಡ್ ಮೇಲೆ ಬಿಜೆಪಿಯ ಕಲ್ಯಾಣ್ ಶಾಸಕ ಗಣಪತ್ ಗಾಯಕ್ವಾಡ್ ಗುಂಡು ಹಾರಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ದತ್ತಾತ್ರೇಯ ಶಿಂಧೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಮಗನಿಗೆ ಥಳಿಸಿದ್ದಕ್ಕೆ ಬಂದೂಕು ಬಳಸಿದ್ದೇನೆ:ಬಂಧನಕ್ಕೂ ಮುನ್ನ ಸುದ್ದಿವಾಹಿನಿಯೊಂದರ ಜತೆ ಮಾತನಾಡಿರುವ ಗಣಪತ್ ಗಾಯಕ್‌ವಾಡ್, ಪೊಲೀಸ್ ಠಾಣೆಯಲ್ಲಿ ಮಗನಿಗೆ ಥಳಿಸಿದ್ದರಿಂದ ಬಂದೂಕನ್ನು ಬಳಸಿದ್ದೇನೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಅಪರಾಧಿಗಳ ಸಾಮ್ರಾಜ್ಯ ಸ್ಥಾಪಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಇದೇ ವೇಳೆ ಆರೋಪಿಸಿದ್ದಾರೆ.
ಘರ್ಷಣೆ ನಡೆದಿದ್ದು ಏಕೆ?: ಗಣಪತ್ ಗಾಯಕವಾಡ ಅವರ ಮಗನ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ದೂರು ನೀಡಲು ಪೊಲೀಸ್ ಠಾಣೆಗೆ ಬಂದಿದ್ದಾಗ ಮಹೇಶ್ ಗಾಯಕ್ವಾಡ್ ತನ್ನ ಜನರೊಂದಿಗೆ ಬಂದಿದ್ದರು. ಈ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಕೊಠಡಿಯಲ್ಲಿ ಶಾಸಕ ಮತ್ತು ಸೇನಾ ನಾಯಕರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಗಣಪತ್ ಗಾಯಕ್ವಾಡ್, ಹಿರಿಯ ಇನ್ಸ್‌ಪೆಕ್ಟರ್ ಚೇಂಬರ್‌ನೊಳಗೆ ಮಹೇಶ್ ಗಾಯಕ್ವಾಡ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೆಚ್ಚುವರಿ ಸಿಪಿ ಶಿಂಧೆ ಹೇಳಿದ್ದಾರೆ.
ಮಹೇಶ್ ಗಾಯಕ್ವಾಡ್ಗೆ ಶಸ್ತ್ರಚಿಕಿತ್ಸೆ:ಮಹೇಶ್ ಗಾಯಕ್ವಾಡ್ ಅವರನ್ನು ಥಾಣೆಯ ಖಾಸಗಿ ವೈದ್ಯಕೀಯ ಕೇಂದ್ರಕ್ಕೆ ಸ್ಥಳಾಂತರಿಸುವ ಮೊದಲು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದು ಯಶಸ್ವಿಯಾಗಿದೆ ಎಂದು ಶಿವಸೇನೆಯ ಕಲ್ಯಾಣ್ ಉಸ್ತುವಾರಿ ಗೋಪಾಲ್ ಲ್ಯಾಂಡ್ಗೆ ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತ್ಯಕ್ಷ ದರ್ಶಿಗಳು ಹೇಳಿದ್ದು ಹೀಗೆ:ಮಹೇಶ್ ಗಾಯಕ್ವಾಡ್ ಮತ್ತು ಅವರ ಬೆಂಬಲಿಗನೊಬ್ಬನಿಗೆ ಐದು ಗುಂಡುಗಳು ತಗುಲಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದರು. ವರದಿಗಳ ಪ್ರಕಾರ, ಶುಕ್ರವಾರ ಹಿಲ್‌ಲೈನ್ ಪೊಲೀಸ್ ಠಾಣೆಯ ಹಿರಿಯ ಇನ್‌ಸ್ಪೆಕ್ಟರ್ ಅನಿಲ್ ಜಗತಾಪ್ ಕೊಠಡಿಯಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಮತ್ತು ನಗರ ಮುಖ್ಯಸ್ಥ ಮಹೇಶ್ ಗಾಯಕ್‌ವಾಡ್ ಸಂಭಾಷಣೆ ನಡೆಸುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಅವರ ಬೆಂಬಲಿಗರು ಘರ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ಬಿಜೆಪಿ ಶಾಸಕ ಹಾಗೂ ಅವರ ಬೆಂಬಲಿಗರು ಮಹೇಶ್ ಗಾಯಕ್ವಾಡ್ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗಿತ್ತು ಘಟನೆಯಲ್ಲಿ ಶಿವಸೇನೆ ನಾಯಕ ಮಹೇಶ್ ಗಾಯಕ್ವಾಡ್ ತೀವ್ರವಾಗಿ ಗಾಯಗೊಂಡಿದ್ದು, ಥಾಣೆಯ ಜುಪಿಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
"ಮಹೇಶ್ ಗಾಯಕವಾಡ ಮತ್ತು ಗಣಪತ್ ಗಾಯಕವಾಡ ನಡುವೆ ಏನೋ ಭಿನ್ನಾಭಿಪ್ರಾಯಗಳಿದ್ದು, ದೂರು ನೀಡಲು ಠಾಣೆಗೆ ಬಂದಿದ್ದರು. ಗಣಪತ್ ಗಾಯಕವಾಡ ಅವರು ಮಹೇಶ್ ಗಾಯಕವಾಡ ಮತ್ತು ಅವರ ಜನರ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ‘‘ ಎಂದು ಡಿಸಿಪಿ ಸುಧಾಕರ ಪತ್ತಾರೆ ಈ ಮೊದಲು ತಿಳಿಸಿದ್ದರು.
ಶಿವಸೇನೆ ಉದ್ದವ್ ಬಣ ದಿಂದ ವಾಗ್ದಾಳಿ:ಏತನ್ಮಧ್ಯೆ, ಶಿವಸೇನಾ (ಯುಬಿಟಿ) ನಾಯಕ ಆನಂದ್ ದುಬೆ ಅವರು ಇದು '3-ಎಂಜಿನ್ ಸರ್ಕಾರ'ದ ಆಡಳಿತ ಎಂದು ತರಾಟೆಗೆ ತೆಗೆದುಕೊಂಡರು. ಪೊಲೀಸ್ ಠಾಣೆಯೊಳಗೆ ಈ ಗುಂಡಿನ ದಾಳಿ ನಡೆದಿದೆ, ಗುಂಡಿನ ದಾಳಿ ನಡೆಸಿದವರು ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್. ಅದು ಶಿವಸೇನೆ ಶಿಂಧೆ ಬಣದ ಮುಖಂಡ ಮಹೇಶ್ ಗಾಯಕವಾಡ ಮೇಲೆ ಈ ಗುಂಡಿನ ದಾಳಿ ನಡೆದಿದೆ. ಲಕ್ಷ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕಾದ ಶಾಸಕ ಜನರ ಮೇಲೆ ಗುಂಡಿನ ದಾಳಿ ನಡೆಸುತ್ತಿರುವುದು ದುರದೃಷ್ಟಕರ. ತ್ರಿಬಲ್ ಇಂಜಿನ್ ಸರ್ಕಾರದಲ್ಲಿ ಎರಡು ಪಕ್ಷಗಳ ನಾಯಕರು ಹೊಡೆದಾಡಿಕೊಂಡು ಪರಸ್ಪರ ಹತ್ಯೆಗೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದನ್ನು ಓದಿ:ಮನರೇಗಾ ಸೇರಿ ವಿವಿಧ ಯೋಜನೆಗಳ ಅನುದಾನ ಬಾಕಿ: ಕೇಂದ್ರದ ವಿರುದ್ಧ ಧರಣಿ ಆರಂಭಿಸಿದ ಮಮತಾ