ಚೆನ್ನೈ: ಕೋಮಾ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರ ಹೆಸರಿನಲ್ಲಿರುವ 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಅಥವಾ ಅಡಮಾನ ಇಡಲು ಮತ್ತು ಆ ಹಣವನ್ನು ವೈದ್ಯಕೀಯ ವೆಚ್ಚಗಳಿಗೆ ಬಳಸಲು ಮದ್ರಾಸ್ ಹೈಕೋರ್ಟ್ ಆ ವ್ಯಕ್ತಿಯ ಪತ್ನಿಗೆ ಅನುಮತಿ ನೀಡಿದೆ. ಮಾರಾಟ ಅಥವಾ ಅಡಮಾನದಿಂದ ಬಂದ ಹಣವನ್ನು ಕುಟುಂಬದ ನಿರ್ವಹಣೆಗೂ ಬಳಸಬಹುದು ಎಂದು ನ್ಯಾಯಾಲಯ ಆದೇಶಿಸಿದೆ.
ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಮತ್ತು ಪಿ.ಬಿ. ಬಾಲಾಜಿ ಅವರನ್ನೊಳಗೊಂಡ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಬುಧವಾರ ಏಕಸದಸ್ಯ ಪೀಠದ ಆದೇಶವನ್ನು ರದ್ದುಗೊಳಿಸಿ ಮೇಲಿನಂತೆ ತೀರ್ಪು ನೀಡಿದೆ. ಈ ವರ್ಷದ ಆರಂಭದಿಂದಲೂ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ಪತಿ ಎಂ. ಶಿವಕುಮಾರ್ ಅವರ ಪೋಷಕರಾಗಿ ತನ್ನನ್ನು ನೇಮಿಸುವಂತೆ ಕೋರಿ ಚೆನ್ನೈನ ಎಸ್. ಶಶಿಕಲಾ ಎಂಬುವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಏಕಸದಸ್ಯ ಪೀಠವು ಏಪ್ರಿಲ್ 23 ರಂದು ವಜಾಗೊಳಿಸಿತ್ತು.
ತನ್ನ ಪತಿಯ ಪೋಷಕಳಾಗಿ ತನ್ನನ್ನು ನೇಮಿಸಬೇಕು ಮತ್ತು ಆ ಮೂಲಕ ಆತನ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಲು ಮತ್ತು ಅಗತ್ಯವಿದ್ದರೆ, ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ಪಕ್ಕದ ವಾಲ್ ಟಾಕ್ಸ್ ರಸ್ತೆಯಲ್ಲಿರುವ ಆತನ ಒಡೆತನದ ಸ್ಥಿರಾಸ್ತಿಯನ್ನು ಮಾರಾಟ ಮಾಡಲು ಅಥವಾ ಅಡಮಾನ ಇಡಲು ಅನುಮತಿ ನೀಡಬೇಕು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.
2017 ರ ಮಾನಸಿಕ ಆರೋಗ್ಯ ಕಾಯ್ದೆಯಲ್ಲಿ ಹಣಕಾಸಿನ ವಿಚಾರದ ಬಗ್ಗೆ ಯಾವುದೇ ನಿಬಂಧನೆಗಳು ಇಲ್ಲವಾದ್ದರಿಂದ ಪೋಷಕರನ್ನು ನೇಮಿಸುವಂತೆ ಕೋರಲಾದ ರಿಟ್ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ಏಕಸದಸ್ಯ ಪೀಠದ ನ್ಯಾಯಾಧೀಶರು ತೀರ್ಪು ನೀಡಿದ್ದರು. ಅಲ್ಲದೆ ಪೋಷಕರ ನೇಮಕಾತಿಯ ಆದೇಶಕ್ಕಾಗಿ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಅವರು ಅರ್ಜಿದಾರರಿಗೆ ಸೂಚಿಸಿದ್ದರು.
ರಿಟ್ ಅರ್ಜಿದಾರರು ಫೆಬ್ರವರಿ 13 ಮತ್ತು ಏಪ್ರಿಲ್ 4 ರ ನಡುವೆ ಖಾಸಗಿ ಆಸ್ಪತ್ರೆಯಲ್ಲಿ ಪತಿಯ ವೈದ್ಯಕೀಯ ವೆಚ್ಚಕ್ಕಾಗಿ ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದನ್ನು ಪರಿಗಣಿಸಿದ ನ್ಯಾಯಮೂರ್ತಿ ಸ್ವಾಮಿನಾಥನ್ ನೇತೃತ್ವದ ಮದ್ರಾಸ್ ಹೈಕೋರ್ಟ್ನ ವಿಭಾಗೀಯ ಪೀಠವು ಏಕಸದಸ್ಯ ಪೀಠದ ಆದೇಶವನ್ನು ತಳ್ಳಿ ಹಾಕಿತು.