ಪಾಟ್ನಾ(ಬಿಹಾರ):ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಯ (ಎನ್‌ಡಿಎ) ಭಾಗವಾಗಿದ್ದ ಬಿಹಾರದ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಕೂಟದಿಂದ ಹಿಂದೆ ಸರಿದಿದೆ. ಇದರ ಜೊತೆಗೆ ಪಕ್ಷದ ಅಧ್ಯಕ್ಷ ಪಶುಪತಿ ಕುಮಾರ್ ಪಾರಸ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾಗಿ ಘೋಷಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯಲ್ಲಿ ತಮ್ಮ ಪಕ್ಷವನ್ನು ಕಡೆಗಣಿಸಲಾಗಿದೆ. ಹೀಗಾಗಿ ಎನ್ಡಿಎಯಿಂದ ಹೊರಬಂದಿದ್ದೇವೆ. ತಮ್ಮ ಪಕ್ಷಕ್ಕೆ ಅನ್ಯಾಯವಾಗಿದೆ ಎಂದು ಅವರು ಹೇಳಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧೆಯ ಬಗ್ಗೆ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಎನ್‌ಡಿಎ ಮೈತ್ರಿಕೂಟವು ಬಿಹಾರ ಲೋಕಸಭೆಗೆ 40 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಪ್ರಕಟಿಸಿದೆ. ನಮ್ಮ ಪಕ್ಷವು 5 ಸಂಸದರನ್ನು ಹೊಂದಿತ್ತು. ನಾನು ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಆದರೂ ಪಕ್ಷಕ್ಕೆ ಯಾವುದೇ ಸ್ಥಾನಗಳನ್ನು ನೀಡಿಲ್ಲ. ನಮಗೆ ಅನ್ಯಾಯವಾಗಿದೆ. ಆದ್ದರಿಂದ, ನಾನು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಪಶುಪತಿ ಕುಮಾರ್ ಅಸಮಾಧಾನ ಹೊರಹಾಕಿದರು.