ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಆಡಳಿತವು ಮಾಜಿ ಐಪಿಎಸ್ ಅಧಿಕಾರಿ ಮುನೀರ್ ಖಾನ್ ಮತ್ತು ಅವರ ನಿವೃತ್ತ ಐಎಎಸ್ ಸಹೋದರ ಬಶೀರ್ ಖಾನ್ ಸೇರಿದಂತೆ ಹಲವಾರು ರಾಜಕಾರಣಿಗಳ ಭದ್ರತೆ ಹಿಂತೆಗೆದುಕೊಂಡಿದೆ. ಅಸ್ಥಿರ ಪರಿಸ್ಥಿತಿಗಳನ್ನು ಹೊಂದಿರುವ ಕಾಶ್ಮೀರದಲ್ಲಿ ಸರ್ಕಾರದ ಈ ನಿರ್ಧಾರದಿಂದ ತಮ್ಮ ಜೀವಕ್ಕೆ ಅಪಾಯ ಎದುರಾಗಿದೆ ಎಂದು ಅಧಿಕಾರಿಗಳು ಮತ್ತು ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ರಾಜ್ಯ ಮಟ್ಟದ ಸಮಿತಿಯು (ಎಸ್ಎಲ್ಸಿ) ತೆಗೆದುಕೊಂಡ ನಿರ್ಧಾರ ಉಲ್ಲೇಖಿಸಿರುವ ಶ್ರೀನಗರ ಜಿಲ್ಲಾ ಪೊಲೀಸ್ ಅಧಿಕಾರಿಗಳು, ರಾಜಕಾರಣಿಗಳು, ಮಾಜಿ ಪೊಲೀಸ್ ಅಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಮತ್ತು ಪತ್ರಕರ್ತರು ಸೇರಿದಂತೆ 57 ವಿಐಪಿಗಳ 130 ವೈಯಕ್ತಿಕ ಭದ್ರತಾ ಅಧಿಕಾರಿಗಳು (ಪಿಎಸ್ಒ) ಮತ್ತು ವಸತಿ ರಕ್ಷಕರನ್ನು ಹಿಂಪಡೆದಿರುವುದಾಗಿ ಹೇಳಿದೆ.
"ಮಾರ್ಚ್ 30, 2024 ರಂದು ರಾಜ್ಯ ಮಟ್ಟದ ಸಮಿತಿ (ಎಸ್ಎಲ್ಸಿ)ಯು ತೆಗೆದುಕೊಂಡ ನಿರ್ಧಾರಕ್ಕೆ ಅನುಸಾರವಾಗಿ, ವಿವಿಧ ಸಂರಕ್ಷಿತ ವ್ಯಕ್ತಿಗಳಿಗೆ ನೀಡಲಾಗಿದ್ದ ಭದ್ರತೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂತೆಗೆದುಕೊಳ್ಳಲಾಗಿದೆ" ಎಂದು ಶ್ರೀನಗರದ ಎಸ್ಎಸ್ಪಿ ಹೊರಡಿಸಿದ ಆದೇಶದಲ್ಲಿ ಶ್ರೀನಗರದ ಪೊಲೀಸ್ ಪ್ರಧಾನ ಕಚೇರಿಯಿಂದ ಬಂದ ಸಂವಹನವನ್ನು ಉಲ್ಲೇಖಿಸಿ ತಿಳಿಸಲಾಗಿದೆ.
"ಶ್ರೀನಗರ ಜಿಲ್ಲೆಯ ಎಲ್ಲಾ ವಲಯ ಎಸ್ಎಸ್ಪಿಗಳು ತಮ್ಮ ವ್ಯಾಪ್ತಿಯಿಂದ ಮೇಲಿನ ಸಿಎಪಿಎಫ್ ಮತ್ತು ಸಶಸ್ತ್ರ ಗಾರ್ಡ್ಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅದೇ ರೀತಿ ಶ್ರೀನಗರದ ಡಿವೈಎಸ್ಪಿ ಡಿಎಆರ್ ಡಿಪಿಎಲ್ ತಕ್ಷಣವೇ ಎಲ್ಲ ಪಿಎಸ್ಒಗಳು ಮತ್ತು ಗಾರ್ಡ್ಗಳನ್ನು ಹಿಂತೆಗೆದುಕೊಳ್ಳಬೇಕು" ಎಂದು ಜುಲೈ 2 ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.
ಭದ್ರತೆ ಹಿಂಪಡೆಯಲಾದ 28 ಮಂದಿಯಲ್ಲಿ ಬಿಜೆಪಿ, ಅಪ್ನಿ ಪಾರ್ಟಿ, ಪೀಪಲ್ಸ್ ಕಾನ್ಫರೆನ್ಸ್, ನ್ಯಾಷನಲ್ ಕಾನ್ಫರೆನ್ಸ್, ಕಾಂಗ್ರೆಸ್ ಮತ್ತು ಇತರ ಸಣ್ಣ ಪಕ್ಷಗಳಿಗೆ ಸೇರಿದ ರಾಜಕಾರಣಿಗಳು, ಐವರು ಮಾಜಿ ನ್ಯಾಯಾಧೀಶರು, ಆರು ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ನಿವೃತ್ತ ಅಧಿಕಾರಿ ಬಶೀರ್ ಖಾನ್ ಸೇರಿದಂತೆ ಮೂವರು ಅಧಿಕಾರಿಗಳು ಸೇರಿದ್ದಾರೆ.
ಆದೇಶದ ಪ್ರಕಾರ, ಝಡ್ + ಭದ್ರತೆಯನ್ನು ಹೊಂದಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ನ ಮಾಜಿ ಎಡಿಜಿಪಿ ಮುನೀರ್ ಖಾನ್ ಅವರ ಪಿಎಸ್ಒಗಳು ಮತ್ತು ವಸತಿ ಗಾರ್ಡ್ಗಳನ್ನು ಹಿಂಪಡೆಯಲಾಗಿದೆ. ಹಾಗೆಯೇ ಕಾಶ್ಮೀರದ ವಿಭಾಗೀಯ ಆಯುಕ್ತರಾಗಿ ನಿವೃತ್ತರಾದ ಅವರ ಸಹೋದರ ಬಶೀರ್ ಖಾನ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಕೂಡ ಹಿಂಪಡೆಯಲಾಗಿದೆ.
ಆಗಸ್ಟ್ 5, 2019 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ಸಂದರ್ಭದಲ್ಲಿ ಮುನೀರ್ ಖಾನ್ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಮತ್ತು ಬಶೀರ್ ಖಾನ್ ಕಾಶ್ಮೀರದ ವಿಭಾಗೀಯ ಆಯುಕ್ತರಾಗಿದ್ದರು. ನಿವೃತ್ತಿಯ ನಂತರ, ಮುನೀರ್ ಖಾನ್ ಅವರನ್ನು ಜಮ್ಮು ಮತ್ತು ಕಾಶ್ಮೀರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರನ್ನಾಗಿ ನೇಮಿಸಲಾಯಿತು.
"ಈ ವಿಷಯದಲ್ಲಿ ನಾವು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ಇದು ಸರ್ಕಾರದ ನಿರ್ಧಾರ. ಆದರೆ,ಅದು ನಮ್ಮನ್ನು ದುರ್ಬಲರನ್ನಾಗಿ ಮಾಡುತ್ತದೆ. ಈ ನಿರ್ಧಾರವನ್ನು ಮರುಪರಿಶೀಲಿಸಬೇಕು" ಎಂದು ಹೆಸರು ಹೇಳಲು ಇಚ್ಛಿಸದ ನಿವೃತ್ತ ಅಧಿಕಾರಿಯೊಬ್ಬರು ಈಟಿವಿ ಭಾರತ್ಗೆ ತಿಳಿಸಿದರು.
ಬಿಜೆಪಿಯ "ಬಿ-ಟೀಮ್" ಎಂದು ಆರೋಪಿಸಲ್ಪಟ್ಟ ಅಪ್ನಿ ಪಕ್ಷ ಮತ್ತು ಪೀಪಲ್ಸ್ ಕಾನ್ಫರೆನ್ಸ್ ನಾಯಕರ ಭದ್ರತೆಯನ್ನು ಕೂಡ ಹಿಂಪಡೆಯಲಾಗಿದೆ. ಶ್ರೀನಗರದ ಮಾಜಿ ಮೇಯರ್ ಮತ್ತು ಅಪ್ನಿ ಪಕ್ಷದ ಯುವ ಅಧ್ಯಕ್ಷ ಜುನೈದ್ ಮಟ್ಟು ಮತ್ತು ಅಪ್ನಿ ಪಕ್ಷದ ಪ್ರಾಂತೀಯ ಅಧ್ಯಕ್ಷ ಅಶ್ರಫ್ ಮಿರ್ ಸೇರಿದಂತೆ ಪಕ್ಷದ ಏಳು ನಾಯಕರ ಭದ್ರತೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಮಿರ್ ಇತ್ತೀಚೆಗೆ ಶ್ರೀನಗರ ಕ್ಷೇತ್ರದಿಂದ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಎನ್ಸಿಯ ಆಗಾ ರುಹುಲ್ಲಾ ಮೆಹ್ದಿ ವಿರುದ್ಧ ಠೇವಣಿ ಕಳೆದುಕೊಂಡಿದ್ದರು.
ಆಡಳಿತಾರೂಢ ಬಿಜೆಪಿಯ ನಾಲ್ವರು ಸದಸ್ಯರ ಭದ್ರತೆಯನ್ನು ಸಹ ಹಿಂಪಡೆಯಲಾಗಿದೆ. ಸಜಾದ್ ಲೋನ್ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್ಗೂ ಬಿಸಿ ತಟ್ಟಿದೆ. ಅನ್ಸಾರಿ ಕುಟುಂಬದ ಮೂವರು ಸೇರಿದಂತೆ ನಾಲ್ವರು ನಾಯಕರ ಭದ್ರತೆ ಹಿಂಪಡೆಯಲಾಗಿದೆ. ಆದರೆ ಇಮ್ರಾನ್ ಅನ್ಸಾರಿ ಅವರ ಭದ್ರತೆಯನ್ನು ಮುಂದುವರಿಸಲಾಗಿದೆ. ಅವರ ಚಿಕ್ಕಪ್ಪ ಅಬಿದ್ ಅನ್ಸಾರಿ ಅವರ ಭದ್ರತೆಯನ್ನು ಹಿಂಪಡೆಯಲಾಗಿದೆ.
ಇದನ್ನೂ ಓದಿ : ಜಾಮೀನು ನೀಡುವಾಗ ಗೂಗಲ್ ಲೊಕೇಶನ್ ಶೇರ್ ಮಾಡುವ ಷರತ್ತು ವಿಧಿಸುವಂತಿಲ್ಲ: ಸುಪ್ರೀಂ ಕೋರ್ಟ್ - Bail Conditions