ಜಮ್ಮು:ಡಕಾಯಿತರು ಚಿನ್ನ, ಬೆಳ್ಳಿ, ಹಣ ಕದ್ದು ಜೈಲು ಪಾಲಾಗಿದ್ದನ್ನು ನೋಡಿದ್ದೇವೆ. ಆದರೆ, ಈ ಪ್ರಕರಣ ತುಸು ಬೇರೆಯದ್ದೇ ಇದೆ. ಹಣದ ಆಸೆಗಾಗಿ ಈ ಖದೀಮರು ಡ್ರೈಫ್ರೂಟ್ಸ್ ಕದ್ದಿದ್ದಾರೆ. ಜೊತೆಗೆ ನಕಲಿ ಅಪಘಾತದ ಕಥೆ ಕಟ್ಟಿ 50 ಲಕ್ಷ ರೂಪಾಯಿ ಮೌಲ್ಯದ ಡ್ರೈ ಫ್ರೂಟ್ಸ್ ಅನ್ನು ಎಗರಿಸಲು ಹೋಗಿ ಪೊಲೀಸರ ಅತಿಥಿಗಳಾಗಿದ್ದಾರೆ.
ಈ ಪ್ರಕರಣವನ್ನು ಜಮ್ಮು- ಕಾಶ್ಮೀರ ಪೊಲೀಸರು ಬೇಧಿಸಿದ್ದಾರೆ. ಕೆಲ ದಿನಗಳ ಹಿಂದೆ ನಡೆದ ಅಪಘಾತ ಪ್ರಕರಣದ ಹಿಂದಿನ ರಹಸ್ಯವನ್ನು ಪತ್ತೆ ಮಾಡಿದ್ದಾರೆ. ಕಮರಿಗೆ ಬಿದ್ದಿದ್ದ ಟ್ರಕ್ ಅನ್ನು ಉದ್ದೇಶಪೂರ್ವಕವಾಗಿ ಬೀಳಿಸಿ 40-50 ಲಕ್ಷ ರೂಪಾಯಿ ಮೌಲ್ಯದ ಡ್ರೈ ಫ್ರೂಟ್ಸ್ ಲೂಟಿ ಮಾಡಿದ ನಾಲ್ವರು ಸಂಚುಕೋರರನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ:ಘಟನೆ ನಡೆದಿದ್ದು ಸೆಪ್ಟೆಂಬರ್ 12 ರಂದು. 50 ಲಕ್ಷ ರೂಪಾಯಿ ಮೌಲ್ಯದ ಡ್ರೈ ಫ್ರೂಟ್ಸ್ ಅನ್ನು ಟ್ರಕ್‌ಗೆ ಲೋಡ್ ಮಾಡಿ ಜಮ್ಮುವಿನಿಂದ ಶ್ರೀನಗರಕ್ಕೆ ಕಳುಹಿಸಲಾಗುತ್ತಿತ್ತು. ಟ್ರಕ್ ಚಾಲಕ ಮೊಹಮದ್ ಮತ್ತು ಆತನ ಮೂವರು ಸಹಚರರು ಡ್ರೈಫ್ರೂಟ್ಸ್ ಅನ್ನು ಕದಿಯಲು ಹೊಂಚು ಹಾಕಿದ್ದರು.
ಅದರಂತೆ ಯೋಜನೆ ರೂಪಿಸಿದ ಖದೀಮರು ಟ್ರಕ್ ಜಮ್ಮು-ಶ್ರೀನಗರ ಹೆದ್ದಾರಿಯ ಪಾಂಥ್ಯಾಲ್ ಬಳಿ ಹೋಗುತ್ತಿದ್ದಾಗ ಕಮರಿಗೆ ಬೀಳಿಸುವ ಸ್ಕೆಚ್ ಹಾಕಿದ್ದರು. ಸೆಪ್ಟೆಂಬರ್ 12 ಮತ್ತು 13 ರ ರಾತ್ರಿ ಶ್ರೀನಗರದಲ್ಲಿ ವಿತರಿಸಬೇಕಾದ 400 ಬಾಕ್ಸ್ಗಳ ಡ್ರೈ ಫ್ರೂಟ್ಸ್ ಅನ್ನು ಬಾನ್ ಟೋಲ್ ಪ್ಲಾಜಾ ಪ್ರದೇಶದ ಬಳಿ ಮತ್ತೊಂದು ಟ್ರಕ್‌ಗೆ ವರ್ಗಾಯಿಸಿದ್ದರು. ಅಪಘಾತವನ್ನು ದೃಢೀಕರಿಸಲು ಟ್ರಕ್ನಲ್ಲಿ 10-15 ಬಾಕ್ಸ್‌ಗಳನ್ನು ಮಾತ್ರ ಉಳಿಸಿದ್ದರು.