ವರಂಗಲ್(ತೆಲಂಗಾಣ): ಆರೋಗ್ಯವೇ ಭಾಗ್ಯ ಎಂದು ಹಿರಿಯರು ಯಾವಾಗಲೂ ಹೇಳುತ್ತಿರುತ್ತಾರೆ. ಪ್ರಸ್ತುತ ಜನರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಹಲವರಿಗೆ ಹೊರಗೆ ಹೋಗಿ ವ್ಯಾಯಾಮ ಮಾಡಲು ಸಮಯದ ಕೊರತೆ ಇರುವುದು ಅಥವಾ ಮನೆಯಲ್ಲೇ ವ್ಯಾಯಾಮ ಮಾಡಲು ಟ್ರೆಡ್‌ಮಿಲ್ ನಂತಹ ಸಾಧನ ಖರೀದಿಸುವಷ್ಟು ಹಣ ಇಲ್ಲದಿರುವುದು ಸವಾಲಿನ ಸಂಗತಿಯಾಗಿದೆ. ಇಂತಹವರ ಸಮಸ್ಯೆಯನ್ನು ಮನಗಂಡ ವರಂಗಲ್ನ ಹರೀಶ್ ಎಂಬ ಯುವ ಹೊಸ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ.
ಹೌದು, ಹರೀಶ್ ಅವರು ಕೈಗೆಟುಕುವ ಬೆಲೆಯಲ್ಲಿ ಟ್ರೆಡ್‌ಮಿಲ್‌ಗಳನ್ನು ತಯಾರಿಸಲು ತಮ್ಮ ವೃತ್ತಿ ಕೌಶಲ್ಯವನ್ನು ಬಳಸುತ್ತಿದ್ದಾರೆ. ಈ ಮೂಲಕ ಪ್ರತಿಯೊಬ್ಬರೂ ಮನೆಯಲ್ಲಿದ್ದುಕೊಂಡೇ ಫಿಟ್ ಆಗುವಂತೆ ಮಾಡಲು ಮುಂದಾಗಿದ್ದಾರೆ. ಹಾಗಾದರೆ ಹರೀಶ್ ಅವರ ಸ್ಪೂರ್ತಿದಾಯಕ ಪ್ರಯಾಣ ಮತ್ತು ಅವರ ನವೀನ ಆವಿಷ್ಕಾರದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ವರಂಗಲ್ ಜಿಲ್ಲೆಯ ಕತ್ರಪಲ್ಲಿ ಮೂಲದ ಅರಣ್ ಕುಮಾರ್ ಮತ್ತು ವಸಂತಾ ದಂಪತಿಗೆ ಜನಿಸಿದ ಹರೀಶ್ ಚಾರಿ ಆರ್ಥಿಕ ಸಂಕಷ್ಟಗಳು ಸೇರಿದಂತೆ ಹಲವಾರು ಕಷ್ಟಗಳನ್ನು ಎದುರಿಸಿದ್ದಾರೆ. ಈ ಸವಾಲುಗಳ ಹೊರತಾಗಿಯೂ, ಅವರು ಹಿಂಜರಿಯದೇ ತಮ್ಮ ಕುಟುಂಬವನ್ನು ಪೋಷಿಸಲು ಮರಗೆಲಸದ ಕಾಯಕ ಮಾಡಲು ಶುರು ಮಾಡಿದರು.
ದೃಢಸಂಕಲ್ಪದಿಂದ ಕಷ್ಟಗಳನ್ನು ಎದುರಿದ ಹರೀಶ್: ತಂಗಿಯ ಮದುವೆಗೆ ಮಾಡಿದ ಸಾಲದಿಂದ ಹರೀಶ್, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಆದರೂ, ತನ್ನ ವೃತ್ತಿಯಲ್ಲಿ ಹೊಸತನವನ್ನು ಕಂಡುಕೊಳ್ಳುವ ಬಯಕೆಯಿಂದ ಸ್ವಯಂ ಪ್ರೇರಿತರಾಗಿ ಮರಗೆಲಸದಲ್ಲಿ ತೊಡಗಿಸಿಕೊಂಡರು.
ಮರದಿಂದ ಟ್ರೆಡ್‌ಮಿಲ್ ತಯಾರಿ!: ನಗರಗಳಲ್ಲಿ ಹೆಚ್ಚಾಗಿ ವ್ಯಾಯಾಮಕ್ಕಾಗಿ ಟ್ರೆಡ್‌ಮಿಲ್‌ಗಳನ್ನು ಖರೀದಿಸುವ ಪ್ರವೃತ್ತಿಯನ್ನು ಗಮನಿಸಿದ ಹರೀಶ್, ಮರದಿಂದ ಟ್ರೆಡ್‌ಮಿಲ್ ಅನ್ನು ತಯಾರಿಸಲು ನಿರ್ಧರಿಸಿದರು. ಕೇವಲ 15 ದಿನಗಳಲ್ಲಿ, ಅವರು ಮರ, ಬೆಲ್ಟ್, ಬೇರಿಂಗ್ ಮತ್ತು ರಿಂಗ್ ಬಳಸಿಕೊಂಡು ಸೃಜನಾತ್ಮಕವಾಗಿ ಮರದ ಟ್ರೆಡ್‌ಮಿಲ್ ತಯಾರಿಸಿದರು. ಅವರು ತಯಾರಿಸಿದ ಮರದ ಟ್ರೆಡ್‌ಮಿಲ್ 100 ಕೆ.ಜಿ. ವರೆಗೆ ಭಾರವನ್ನು ತಡೆದುಕೊಳ್ಳುತ್ತದೆ. ಇದು ಸಾಂಪ್ರದಾಯಿಕ ಟ್ರೆಡ್‌ಮಿಲ್‌ಗಳಿಗೆ ಪರ್ಯಾಯ ಆಯ್ಕೆಯಾಗಿದೆ.