ನವದೆಹಲಿ:ಸಿರಿಯಾದಲ್ಲಿ ಉಂಟಾದ ಬಿಕ್ಕಟ್ಟು ಇತರ ದೇಶಗಳಲ್ಲಿ ಆತಂಕ ಸೃಷ್ಟಿಸಿದೆ.ಅಲ್ಲಿನ ಅಧ್ಯಕ್ಷ ಬಶರ್ ಅಸ್ಸಾದ್ ಸರ್ಕಾರವನ್ನು ಬಂಡುಕೋರರು ಪತನಗೊಳಿಸಿದ್ದು, ಹೊಸ ಸರ್ಕಾರ ರಚನೆಗೆ ಸಿದ್ಧತೆ ನಡೆದಿದೆ. ಸದ್ಯ ದೇಶದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆ ಸಿರಿಯಾದಲ್ಲಿ ಭಾರತೀಯ ಪ್ರಜೆಗಳ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಮಂಗಳವಾರ ಸಿರಿಯಾದಿಂದ 75 ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಕಾರ್ಯ ನಡೆದಿದೆ. ಡಮಾಸ್ಕಸ್ ಮತ್ತು ಬೈರುತ್ನಲ್ಲಿನ ಭಾರತೀಯ ರಾಯಭಾರಿ ಕಚೇರಿ ಈ ಸ್ಥಳಾಂತರಕ್ಕೆ ಮುಂದಾಗಿದೆ. ಅಲ್ಲಿನ ಭದ್ರತೆಯ ಹಿತದೃಷ್ಟಿಯ ಮೌಲ್ಯಮಾಪನದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಈ ಸಂಬಂಧ ತಡರಾತ್ರಿ ಹೇಳಿಕೆ ಹೊರಡಿಸಿರುವ ಸಚಿವಾಲಯ, ಸಿರಿಯಾ ದೇಶದಲ್ಲಿನ ಇತ್ತೀಚಿನ ಬೆಳವಣಿಗೆ ಹಿನ್ನೆಲೆ ಭಾರತ ಸರ್ಕಾರವು ಇಂದು 75 ಭಾರತೀಯರ ಸ್ಥಳಾಂತರ ಮಾಡಿದೆ. ಅದರಲ್ಲಿ ಸೈದಾ ಜೈನಬ್ನಲ್ಲಿ ಸಿಲುಕಿದ್ದ 44 ಮಂದಿ ಜಮ್ಮು ಮತ್ತು ಕಾಶ್ಮೀರದ ಜೈರೀನ್ಗಳು ಇದ್ದಾರೆ. ಎಲ್ಲಾ ಭಾರತೀಯರು ಸುರಕ್ಷಿತವಾಗಿ ಲೆಬನಾನ್ ಗಡಿ ದಾಟಿದ್ದು, ಲಭ್ಯವಿರುವ ವಾಣಿಜ್ಯ ವಿಮಾನದಲ್ಲಿ ಭಾರತಕ್ಕೆ ಮರಳಲಿದ್ದಾರೆ ಎಂದು ತಿಳಿಸಿದೆ.
ವಿದೇಶದಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಯು ಭಾರತ ಸರ್ಕಾರದ ಆದ್ಯತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ. ಈ ಹಿನ್ನೆಲೆ ಸಿರಿಯಾದಲ್ಲಿ ಸಿಲುಕಿರುವ ಭಾರತೀಯರು ಡಮಾಸ್ಕ್ಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಸಿರಿಯಾದಲ್ಲಿನ ಪರಿಸ್ಥಿತಿ ಕುರಿತು ಭಾರತ ಕುರಿತು ಸೂಕ್ಷ್ಮ ಮೇಲ್ವಿಚಾರಣೆ ನಡೆಸಲಿದೆ ಎಂದಿದೆ.