ನವದೆಹಲಿ:ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನ ಆರೋಪಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಅವರನ್ನು ಜೆಕ್ ಗಣರಾಜ್ಯವು ಅಮೆರಿಕಕ್ಕೆ ಹಸ್ತಾಂತರ ಮಾಡುವ ಸಾಧ್ಯತೆ ಹೆಚ್ಚಿದೆ. ಈಚೆಗಿನ ವಿದ್ಯಮಾನದಲ್ಲಿ ಗುಪ್ತಾ ಸಲ್ಲಿಸಿದ ಹಸ್ತಾಂತರ ವಿರುದ್ಧದ ಆಕ್ಷೇಪಣಾ ಅರ್ಜಿಯನ್ನು ಜೆಕ್ ಕೋರ್ಟ್ ವಜಾ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಜೆಕ್ ಗಣರಾಜ್ಯದಲ್ಲಿ ಬಂಧಿತರಾಗಿರುವ ನಿಖಿಲ್ ಗುಪ್ತಾ ಅವರ ಅರ್ಜಿಯನ್ನು ಜೆಕ್ ಗಣರಾಜ್ಯದ ಕೋರ್ಟ್ ನಿರಾಕರಿಸಿದೆ. ತಮ್ಮನ್ನು ಅಮೆರಿಕಕ್ಕೆ ಹಸ್ತಾಂತರ ಮಾಡಬಾರದು ಎಂದು ಗುಪ್ತಾ ಅವರು ಕೋರ್ಟ್ಗೆ ಮನವಿ ಮಾಡಿದ್ದರು. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಮೆರಿಕದ ಭದ್ರತಾ ಪಡೆಗಳು ನಿಖಿಲ್ ಗುಪ್ತಾರನ್ನು ತಮಗೆ ಹಸ್ತಾಂತರ ಮಾಡಬೇಕು ಎಂದು ಜೆಕ್ ಸರ್ಕಾರವನ್ನು ಕೋರಿದ್ದವು. ಇದನ್ನು ಅಲ್ಲಿನ ಕೋರ್ಟ್ ಮಾನ್ಯ ಮಾಡಿದೆ ಎಂದರು.
ನಿಖಿಲ್ ಗುಪ್ತಾ ಮೇಲಿನ ಆರೋಪವೇನು?:ಭಾರತೀಯ ಉದ್ಯಮಿಯಾದ ನಿಖಿಲ್ ಗುಪ್ತಾ ಅವರು ಖಲಿಸ್ತಾನಿ ಉಗ್ರ ಮತ್ತು ಸಿಖ್ಸ್ ಫಾರ್ ಜಸ್ಟಿಸ್ (SFJ) ನ ಸಂಸ್ಥಾಪಕ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಎಸ್ಎಫ್ಜೆ ಸಿಖ್ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಸರ್ಕಾರ ಇದನ್ನು ಭಯೋತ್ಪಾದಕ ಸಂಘಟನೆ ಎಂದು ಪರಿಗಣಿಸಿದೆ. 2020 ರಲ್ಲಿ ಪನ್ನುನ್ ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಈತನ ಮೇಲೆ ಮೂರು ದೇಶದ್ರೋಹ ಸೇರಿದಂತೆ 22 ಕ್ರಿಮಿನಲ್ ಪ್ರಕರಣಗಳಿವೆ.