ನವದೆಹಲಿ:ಏಷ್ಯಾ ಫೆಸಿಫಿಕ್ ವಲಯ ಸೇರಿದಂತೆ ಜಗತ್ತಿನಾದ್ಯಂತ ಪ್ರವಾಸಿಗರ ಆಕರ್ಷಕ ತಾಣವಾಗಿ ಭಾರತ ಹೊರಹೊಮ್ಮುತ್ತಿದೆ. 2023ರಲ್ಲಿ ಭಾರತ ಪ್ರವಾಸಕ್ಕೆ 9.24 ಮಿಲಿಯನ್ ವಿದೇಶಿಗರು ಆಗಮಿಸಿದ್ದಾರೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅಂಕಿಅಂಶ ಒದಗಿಸಿದ್ದಾರೆ.
2023ರಲ್ಲಿ ದೇಶಕ್ಕೆ ಏಷ್ಯಾ ಫೆಸಿಫಿಕ್ ಸೇರಿದಂತೆ ಜಗತ್ತಿನೆಲ್ಲೆಡೆಯಿಂದ ಪ್ರವಾಸಿಗರು ಆಗಮಿಸಿದ್ದಾರೆ. ಅದರಲ್ಲೂ ಆಸ್ಟ್ರೇಲಿಯಾ, ಮಲೇಷಿಯಾ, ಸಿಂಗಾಪುರ್, ಜಪಾನ್, ಥೈಲ್ಯಾಂಡ್ ಮತ್ತು ಕೊರಿಯಾ ಸೇರಿದಂತೆ ಪ್ರಮುಖ 20 ದೇಶಗಳು ಭಾರತದ ಪ್ರವಾಸೋದ್ಯಮ ಮೂಲಗಳಾಗಿವೆ ಎಂದು ಸಚಿವರು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದರು.
ಪ್ರವಾಸೋದ್ಯಮ ಸಚಿವರ ಮಾಹಿತಿ ಪ್ರಕಾರ, ದೇಶಕ್ಕೆ ಆಗಮಿಸಿದ 9.24 ಮಿಲಿಯನ್ ವಿದೇಶಿಗರಲ್ಲಿ 1.22 ಮಿಲಿಯನ್ ಪ್ರವಾಸಿಗರು ಏಷ್ಯಾ ಫೆಸಿಫಿಕ್ ಪ್ರದೇಶದ ಆರು ದೇಶಗಳ ಪ್ರವಾಸಿಗರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಪ್ರವಾಸಿಗರ ಸಂಖ್ಯೆಯಲ್ಲಿ ಶೇ 43.5ರಷ್ಟು ಬೆಳವಣಿಗೆ ಕಂಡಿದೆ.
ಜಾಗತಿಕ ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿ ಭಾರತದ ಪಾಲು ಹೆಚ್ಚಿಸಲಾಗುತ್ತದೆ. ಪ್ರವಾಸೋದ್ಯಮ ಮತ್ತು ಪ್ರವಾಸಿಗರ ಸಂಖ್ಯೆ ಏರಿಕೆಗೆ ಮಾರ್ಕೆಟಿಂಗ್ ಮತ್ತು ಪ್ರಚಾರದ ತಂತ್ರ, ಮಧ್ಯಸ್ಥಗಾರರು ಮತ್ತು ಸಾಗರೋತ್ತರ ಭಾರತೀಯ ಮಿಷನ್‌ಗಳ ಸಹಯೋಗವಿದ್ದು, ಇವುಗಳನ್ನು ಸಂಯೋಜಿಸಲಾಗುವುದು ಎಂದರು.
ಈ ನಿಟ್ಟಿನಲ್ಲಿ ಸರ್ಕಾರ ನಿರಂತರವಾಗಿ ಉದ್ಯಮ ತಜ್ಞರು ಮತ್ತು ಇತರೆ ಸಂಬಂಧಿತ ಮಧ್ಯಸ್ಥಗಾರರ ಸಂಪರ್ಕ ಸಾಧಿಸುತ್ತಿದ್ದು, ಅವರಿಂದ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು ಪಡೆದು ಭಾರತದ ಪ್ರವಾಸೋದ್ಯಮ ಉತ್ಪಾದನೆಯನ್ನು ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮತ್ತು ಖಾಸಗಿ ಮಧ್ಯಸ್ಥಗಾರರಿಗೆ ದೇಶೀಯ ಮತ್ತು ವಿದೇಶಿ ಪ್ರವಾಸೋದ್ಯಮದ ಪ್ಯಾಕೇಜ್ ಟೂರ್ ಕಾರ್ಯಕ್ರಮಗಳನ್ನು ನೀಡುತ್ತಿದೆ. ಇದರೊಂದಿಗೆ ಪ್ರವಾಸೋದ್ಯಮ ಸಚಿವಾಲಯ ತನ್ನ ಆತಿಥ್ಯ ಯೋಜನೆಯಡಿ ಪ್ರವಾಸ ಬರಹಗಾರರು, ಪತ್ರಕರ್ತರು, ಛಾಯಾಗ್ರಾಹಕರು, ಚಲನಚಿತ್ರ, ಟಿವಿ ತಂಡಗಳು, ಟ್ರಾವೆಲ್ ಏಜೆಂಟ್‌ಗಳು ಮತ್ತು ಟೂರ್ ಆಪರೇಟರ್‌ಗಳು ಮತ್ತು ಅಭಿಪ್ರಾಯ ತಯಾರಕರನ್ನು ಬಹು ಆಯಾಮದ ಪ್ರವಾಸಿ ತಾಣವಾಗಿ ಪರಿಣಾಮಕಾರಿಯಾಗಿ ಯೋಜಿಸಲು ಆಹ್ವಾನಿಸುತ್ತಿದೆ. ಆಹ್ವಾನಿತ ಅತಿಥಿಗಳು ದೇಶದ ಪ್ರವಾಸೋದ್ಯಮ ಉತ್ಪಾದನೆಯ ಸೌಲಭ್ಯದ ಮಾಹಿತಿ ಮತ್ತು ಜ್ಞಾನ ಪಡೆಯಲಿದ್ದಾರೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ಪ್ರವಾಸ ಮತ್ತು ಪ್ರವಾಸೋದ್ಯಮ ಮೇಳ: ರಾಮೋಜಿ ಫಿಲ್ಮ್ ಸಿಟಿಗೆ ಅತ್ಯುತ್ತಮ ಅಲಂಕಾರ ಪ್ರಶಸ್ತಿ