ಕರ್ನಾಟಕ

karnataka

ETV Bharat / bharat

25 ಸಾವಿರ ಫಾಜಿಲ್, ಕಾಮಿಲ್ ಮದರಸಾ ಪದವೀಧರರು ಅತಂತ್ರ: ಮಾನ್ಯತೆ ಪಡೆದ ವಿವಿಯಲ್ಲಿ ಪ್ರವೇಶಕ್ಕೆ ಒತ್ತಾಯ - MADRASA BOARD DEGREES

ಮದರಸಾ ಮಂಡಳಿಯ ಕುರಿತಾಗಿ ಇತ್ತೀಚೆಗೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ನಂತರ 25 ಸಾವಿರ ಮದರಸಾ ಮಂಡಳಿ ಪದವೀಧರರು ಅತಂತ್ರರಾಗಿದ್ದಾರೆ.

ಮದರಸಾವೊಂದರಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ)
ಮದರಸಾವೊಂದರಲ್ಲಿ ಅಧ್ಯಯನ ನಿರತ ವಿದ್ಯಾರ್ಥಿಗಳು (ಸಂಗ್ರಹ ಚಿತ್ರ) (IANS)

By PTI

Published : Nov 10, 2024, 1:10 PM IST

ಲಕ್ನೋ: ಉತ್ತರ ಪ್ರದೇಶ ಮದರಸಾ ಮಂಡಳಿ ನೀಡುವ ಉನ್ನತ ಶಿಕ್ಷಣ ಪದವಿಗಳನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಘೋಷಿಸಿದ ನಂತರ, ಪ್ರಸ್ತುತ ಈ ಕೋರ್ಸ್​ಗಳನ್ನು ಪೂರ್ಣಗೊಳಿಸುವ ಹಂತದಲ್ಲಿರುವ ಸುಮಾರು 25,000 ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ಬೇರೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಬೇಕೆಂದು ಈಗ ಒತ್ತಾಯ ಕೇಳಿ ಬಂದಿದೆ. ಏತನ್ಮಧ್ಯೆ ಈ ವಿಷಯದ ಎಲ್ಲಾ ಕಾನೂನು ಅಂಶಗಳನ್ನು ಪರಿಗಣಿಸಿದ ನಂತರ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ.

ಸುಪ್ರೀಂ ಕೋರ್ಟ್​ ನವೆಂಬರ್ 5ರಂದು ನೀಡಿದ ಆದೇಶದಲ್ಲಿ, ಉತ್ತರ ಪ್ರದೇಶ ಮದರಸಾ ಮಂಡಳಿ ನೀಡುವ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಸಮಾನವಾದ ಕಾಮಿಲ್ ಮತ್ತು ಫಾಜಿಲ್ ಪದವಿಗಳು ಅಸಾಂವಿಧಾನಿಕ ಎಂದು ಘೋಷಿಸಿದ್ದು, ಈ ಪದವಿಗಳು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಿದೆ.

"ನ್ಯಾಯಾಲಯದ ಈ ತೀರ್ಪಿನಿಂದ ಮದರಸಾ ಮಂಡಳಿಯು ಈಗ ಈ ಕೋರ್ಸ್​ಗಳಿಗೆ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗಿದೆ" ಎಂದು ಉತ್ತರ ಪ್ರದೇಶ ಮದರಿಸ್ ಅರೇಬಿಯಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಮಾನ್ ಖಾನ್ ಹೇಳಿದ್ದಾರೆ.

"ಸುಪ್ರೀಂ ಕೋರ್ಟ್​ನ ಆದೇಶವು ಸರ್ವೋಚ್ಚವಾಗಿದೆ. ಆದರೆ ಮದರಸಾ ಮಂಡಳಿಯ ಕಾಮಿಲ್ ಮತ್ತು ಫಾಜಿಲ್ ಕೋರ್ಸ್​ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಭವಿಷ್ಯವು ಅಂಧಕಾರದಲ್ಲಿ ಮುಳುಗದಂತೆ ನೋಡಿಕೊಳ್ಳಲು ಸರ್ಕಾರ ಯಾವುದಾದರೂ ಸೂಕ್ತ ಮಾರ್ಗವನ್ನು ಕಂಡುಕೊಳ್ಳಬೇಕು" ಎಂದು ಅವರು ಭಾನುವಾರ ಪಿಟಿಐಗೆ ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶವನ್ನು ಅಧ್ಯಯನ ಮಾಡುವ ಮೂಲಕ ಮತ್ತು ಅದರ ವಿವಿಧ ಕಾನೂನು ಅಂಶಗಳನ್ನು ಚರ್ಚಿಸುವ ಮೂಲಕ ಸರ್ಕಾರ ಖಂಡಿತವಾಗಿಯೂ ಪರಿಹಾರ ಕಂಡುಕೊಳ್ಳಲಿದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಓಂ ಪ್ರಕಾಶ್ ರಾಜ್ ಭರ್ ಹೇಳಿದ್ದಾರೆ.

ಮದರಸಾ ಮಂಡಳಿಯ ಕಾಮಿಲ್ ಮತ್ತು ಫಾಜಿಲ್ ಕೋರ್ಸ್​ಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಬೇರೆ ಯಾವುದೇ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ತೀರ್ಪಿನ ಎಲ್ಲಾ ಅಂಶಗಳನ್ನು ಪರಿಗಣಿಸಲಾಗುವುದು ಮತ್ತು ಅದರ ನಂತರವೇ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ" ಎಂದರು.

ಮಂಡಳಿಯು ನಡೆಸುತ್ತಿರುವ ಕಾಮಿಲ್ ಮತ್ತು ಫಾಜಿಲ್ ಕೋರ್ಸ್​ಗಳಲ್ಲಿ ಪ್ರಸ್ತುತ ಸುಮಾರು 25,000 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ ಮತ್ತು ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ಪಾಲಿಸಲಾಗುವುದು ಎಂದು ಮದರಸಾ ಮಂಡಳಿಯ ರಿಜಿಸ್ಟ್ರಾರ್ ಆರ್.ಪಿ.ಸಿಂಗ್ ಹೇಳಿದ್ದಾರೆ.

ಏತನ್ಮಧ್ಯೆ, ಮಂಡಳಿಯ ಮಾಜಿ ಸದಸ್ಯ ಖಮರ್ ಅಲಿ ಮಾತನಾಡಿ, ಮಂಡಳಿಯ ಕಾಮಿಲ್ ಪದವಿಗೆ ಪದವಿಯ ಸ್ಥಾನಮಾನವಿದೆ ಮತ್ತು ಫಾಜಿಲ್ ಪದವಿಗೆ ಸ್ನಾತಕೋತ್ತರ ಪದವಿಯ ಸ್ಥಾನಮಾನವಿದೆ. ಆದರೆ ಈ ಹಿಂದಿನಿಂದಲೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಲು ಈ ಪದವಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು. ಈ ಪದವಿ ಪಡೆದವರು ಕೊನೆ ಪಕ್ಷ ಮದರಸಾಗಳಲ್ಲಿಯೇ ನೌಕರಿ ಪಡೆಯುತ್ತಿದ್ದರು. ಆದರೆ ಈಗ ಸುಪ್ರೀಂ ಕೋರ್ಟ್ ಆದೇಶದ ನಂತರ ಆ ಅವಕಾಶವೂ ಇಲ್ಲವಾಗಿದೆ. ಹೀಗಾಗಿ ಈ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ ಪಡೆಯುವ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಉತ್ತರ ಪ್ರದೇಶದಲ್ಲಿ ಸುಮಾರು 25,000 ಮದರಸಾಗಳಿವೆ. ಇವುಗಳಲ್ಲಿ 16,500 ರಾಜ್ಯ ಮದರಸಾ ಮಂಡಳಿಯಿಂದ ಮಾನ್ಯತೆ ಪಡೆದಿವೆ ಮತ್ತು 8,500 ಮಾನ್ಯತೆ ಪಡೆದಿಲ್ಲ. ಅವುಗಳಲ್ಲಿ ಒಟ್ಟು 560 ಮದರಸಾಗಳಿಗೆ ರಾಜ್ಯ ಸರ್ಕಾರದ ಅನುದಾನ ಲಭ್ಯವಾಗುತ್ತಿದೆ.

ಅಕ್ಟೋಬರ್ 5 ರಂದು ತನ್ನ ಆದೇಶದಲ್ಲಿ ಸುಪ್ರೀಂ ಕೋರ್ಟ್, ಮಾರ್ಚ್ 2024 ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯ್ದೆ, 2004 ರ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ. ಆದಾಗ್ಯೂ, ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ನಿಬಂಧನೆಗಳು (ಕಾಮಿಲ್ ಮತ್ತು ಫಾಜಿಲ್ ಪದವಿಗಳು) ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕಾಯ್ದೆಗೆ ವಿರುದ್ಧವಾಗಿರುವುದರಿಂದ ಅವು ಅಸಂವಿಧಾನಿಕ (ಅಂದರೆ ಮದರಸಾ ಮಂಡಳಿ ಈ ಪದವಿಗಳನ್ನು ನೀಡಲು ಸಾಧ್ಯವಿಲ್ಲ) ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ : ಮಹಿಳೆಯರಿಗೆ ತಿಂಗಳಿಗೆ 2,100 ರೂ., ರೈತರ ಸಾಲ ಮನ್ನಾ: 'ಮಹಾ' ಬಿಜೆಪಿ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ

ABOUT THE AUTHOR

...view details