ಭುವನೇಶ್ವರ್(ಒಡಿಶಾ):ಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ನಿಮಿತ್ತದ ರಥದಲ್ಲಿ ಪ್ರತಿಷ್ಠಾಪಿಸಲಾಗಿದ್ದ ದೇವರ ಮೂರ್ತಿ ಕೆಳಗಿಳಿಸುವಾಗ ಅವಘಡ ಸಂಭವಿಸಿದೆ. ಬಲಭದ್ರ ದೇವರ ವಿಗ್ರಹ ಸೇವಕರ ಮೇಲೆ ಬಿದ್ದಿದೆ. ಇದರಿಂದ ಒಂಬತ್ತು ಜನರು ಗಾಯಗೊಂಡಿದ್ದಾರೆ.
ಜುಲೈ 7ರಂದು ಭಗವಾನ್ ಜಗನ್ನಾಥ, ದೇವಿ ಸುಭದ್ರ ಮತ್ತು ಭಗವಾನ್ ಬಲಭದ್ರರ ವೈಭವದ ರಥಯಾತ್ರೆ ಜರುಗಿತ್ತು. ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ಬಲಭದ್ರ ದೇವರ ರಥದಿಂದ ಗುಂಡಿಚಾ ದೇವಸ್ಥಾನಕ್ಕೆ ದೇವರ ವಿಗ್ರಹವನ್ನು ಕೊಂಡೊಯ್ಯುತ್ತಿದ್ದಾಗ ಜಾರಿ ಸೇವಕರ ಮೇಲೆ ಬಿದ್ದಿದೆ. ಈ ಪೈಕಿ ಐವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ತಿಳಿಸಿದ್ದಾರೆ.
ಸಂಪೂರ್ಣ ವಿವರ: ದೇವರ ಮೂರ್ತಿ ಕೆಳಗಿಳಿಸುವಾಗ ಕಾರ್ಯವನ್ನು 'ಪಹಂಡಿ' ಆಚರಣೆ ಎಂದು ಕರೆಯಲಾಗುತ್ತದೆ. ಎಲ್ಲ ಮೂರು ದೇವರ ವಿಗ್ರಹಗಳನ್ನು ಅವರ ಜನ್ಮಸ್ಥಳವೆಂದು ಪರಿಗಣಿಸಲಾದ ಗುಂಡಿಚಾ ದೇವಾಲಯಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಈ ವೇಳೆ, ಬಲಭದ್ರರ ಭಾರವಾದ ಮರದ ವಿಗ್ರಹವನ್ನು ಕೆಳಗಿಳಿಸುವಾಗ ಆ ಮೂರ್ತಿ ಹೊತ್ತಿದ್ದವರು ನಿಯಂತ್ರಣ ಕಳೆದುಕೊಂಡರು. ವಿಗ್ರಹಕ್ಕೆ ಕಟ್ಟಿದ್ದ ಹಗ್ಗದಂತಹ ವಸ್ತುವಿನಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ಗಾಯಗೊಂಡ ಸೇವಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಜುಲೈ 14ರಂದು ಪುರಿ ಜಗನ್ನಾಥ 'ರತ್ನ ಭಂಡಾರ'ದ ಬೀಗ ತೆರೆಯುವ ಸಾಧ್ಯತೆ