ಗುರೆಲಾ ಪೆಂಡ್ರಾ ಮರ್ವಾಹಿ(ಛತ್ತೀಸ್ಗಢ):ಇಲ್ಲಿನ ಶಾಲೆಯೊಂದರಲ್ಲಿ ನಿರಂತರವಾಗಿ ನಿರ್ಲಕ್ಷ್ಯ ತೋರಿದ ಮತ್ತು ಗೈರು ಹಾಜರಾದ ಶಿಕ್ಷಕರ ವಿರುದ್ಧ ಜಿಲ್ಲಾ ಶಿಕ್ಷಣ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದರು. ಜನವರಿ 4 ರಂದು ಶಾಲೆಯ ಮೂವರು ಶಿಕ್ಷಕರು ಮತ್ತು ಒಬ್ಬ ಸಿಬ್ಬಂದಿಯನ್ನು ಅಮಾನತು ಕೂಡಾ ಮಾಡಲಾಗಿದೆ. ಈ ಸಂಬಂಧ ನೋಟಿಸ್ ಕೂಡಾ ನೀಡಲಾಗಿತ್ತು. ಈ ನೋಟಿಸ್ ಬಳಿಕ ಶಿಕ್ಷಕರೊಬ್ಬರು ಸಲ್ಲಿಕೆ ಮಾಡಿರುವ ರಾಜೀನಾಮೆ ಪತ್ರ ಇದೀಗ ಎಲ್ಲರ ಗಮನ ಸೆಳೆದು ಸದ್ದು ಮಾಡುತ್ತಿದೆ.
ಜಿಪಿಎಂ ಶಿಕ್ಷಕರ ರಾಜೀನಾಮೆ: ಸುನೀಲ್ ಕುಮಾರ್ ಪಟೇಲ್ ಎಂಬ ಶಿಕ್ಷಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ರೆಸಿಗ್ನೇಷನ್ ಇದೀಗ ಅನೇಕರ ಗಮನ ಸೆಳೆದಿದೆ. 2010ರ ಜೂನ್ 21ರಿಂದ ಜಿಪಿಎಂ ಜಿಲ್ಲೆಯ ಮರ್ವಾಹಿ ವಿಕಾಸ್ಖಂಡ್ನ ಗುರುದೇವಪರ ಪ್ರಾಥಮಿಕ ಶಾಲೆಯ ಸಹಾಯಕ ಶಿಕ್ಷಕರಾಗಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸುನೀಲ್ ಕುಮಾರ್ ಪಟೇಲ್ ವಿಕಾಸಖಂಡ್ ಶಿಕ್ಷಾ ಅಧಿಕಾರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಲ್ಲಿ ತಮ್ಮ ರಾಜೀನಾಮೆಗೆ ನೀಡಿರುವ ಕಾರಣ ಮಾತ್ರ ವಿಚಿತ್ರವಾಗಿದೆ.
ರಾಜೀನಾಮೆ ಪತ್ರದಲ್ಲೇನಿದೆ?: "ನನಗೆ ಇನ್ಮುಂದೆ ಕೆಲಸ ಮಾಡಲು ಇಷ್ಟವಿಲ್ಲ. ಸೇವಕ ಮನಸ್ಥಿತಿಯಲ್ಲಿ ನನಗೆ ಜೀವನ ಮಾಡುವ ಇಚ್ಛೆ ಇಲ್ಲ. ನಾನು ಬಾಸ್ ಮನಸ್ಥಿತಿಯಲ್ಲಿ ನನ್ನ ಜೀವನವನ್ನು ಎಂಜಾಯ್ ಮಾಡಬೇಕು. ಈ ಹಿನ್ನೆಲೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ, ನನ್ನ ಈ ರಾಜೀನಾಮೆ ಪತ್ರವನ್ನು ಅಂಗೀಕರಿಸಿ, ಈ ನಿರ್ಧಾರವನ್ನು ಸಂಪೂರ್ಣ ಅರಿವು ಹಾಗೂ ಸ್ವಯಂ ನಿರ್ಧಾರದಿಂದ ಕುಟುಂಬ ಸದಸ್ಯರ ಸಂಪರ್ಕ ಮಾಡಿ ತೀರ್ಮಾನ ತೆಗೆದುಕೊಂಡಿದ್ದೇನೆ " ಎಂದು ಬರೆದಿದ್ದಾರೆ.
ಇನ್ನು ಈ ರಾಜೀನಾಮೆ ಪತ್ರ ಸ್ವೀಕರಿಸಿ ಮಾತನಾಡಿರುವ ಜಿಪಿಎಂ ಜಿಲ್ಲಾ ಶಿಕ್ಷಣಾಧಿಕಾರಿ ಜೆಕೆ ಶಾಸ್ತ್ರಿ, ಮಾಧ್ಯಮಗಳಿಂದ ಈ ಮಾಹಿತಿಯನ್ನು ಪಡೆದಿದ್ದೇನೆ. ನಮ್ಮ ಕಚೇರಿಯಲ್ಲಿ ಆತ ಔಪಚಾರಿಕ ರಾಜೀನಾಮೆ ನೀಡಿದ್ದಾನೆ. ಇದಕ್ಕೆ ನಿರ್ದಿಷ್ಟ ಪ್ರಕ್ರಿಯೆ ಇದೆ. ರಾಜೀನಾಮೆಗೆ ಮೂರು ತಿಂಗಳ ಮುಂಚೆಯೇ ಮಾಹಿತಿ ನೀಡಬೇಕಿದೆ. ಇದಾದ ಬಳಿಕ ಸಂಪೂರ್ಣ ಪ್ರಕ್ರಿಯೆ ನಡೆಯಲಿದ್ದು, ಸರ್ಕಾರ ಅಥವಾ ಶಿಕ್ಷಣ ಇಲಾಖೆ ಈ ರಾಜೀನಾಮೆಯನ್ನು ಸ್ವೀಕರಿಸಲಿದೆ ಎಂದು ತಿಳಿಸಿದ್ದಾರೆ.