ಹೈದರಾಬಾದ್:ಗ್ರೇಟರ್ ಹೈದರಾಬಾದ್ನ ಉಪ ಮೇಯರ್ ಎಂ. ಶ್ರೀಲತಾ ಮತ್ತು ಅವರ ಪತಿ ಬಿಆರ್ಎಸ್ ಟ್ರೇಡ್ ಯೂನಿಯನ್ ಅಧ್ಯಕ್ಷ ಶೋಭನ್ ರೆಡ್ಡಿ ಅವರು ಭಾನುವಾರ ಬಿಆರ್ಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ರಾಜ್ಯ ಪ್ರಧಾನ ಕಚೇರಿ ಗಾಂಧಿ ಭವನದಲ್ಲಿ ದಂಪತಿಗಳು ಔಪಚಾರಿಕವಾಗಿ ಕಾಂಗ್ರೆಸ್ ಸೇರಿದರು.
ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿ ದೀಪಾ ದಾಸ್ ಮುನ್ಷಿ ಅವರು ಶ್ರೀಲತಾ ಮತ್ತು ಶೋಭನ್ ರೆಡ್ಡಿ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು. ತೆಲಂಗಾಣ ಚಳವಳಿಯಲ್ಲಿ ಭಾಗವಹಿಸಿದ ನಾಯಕರಿಗೆ ಬಿಆರ್ಎಸ್ನಲ್ಲಿ ಸೂಕ್ತ ಮಾನ್ಯತೆ ಸಿಗುತ್ತಿಲ್ಲ ಎಂದು ದಂಪತಿ ಆರೋಪಿಸಿದ್ದಾರೆ.
ಸಾರಿಗೆ ಸಚಿವ ಪೊನ್ನಂ ಪ್ರಭಾಕರ್ ಮಾತನಾಡಿ, ಅವಮಾನವನ್ನು ಸಹಿಸಲಾಗದೆ ಬಿಆರ್ಎಸ್ ನಾಯಕರು ಕಾಂಗ್ರೆಸ್ ಸೇರುತ್ತಿದ್ದಾರೆ, ಕಾಂಗ್ರೆಸ್ ಸೇರುವ ಪ್ರತಿಯೊಬ್ಬ ನಾಯಕರಿಗೂ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಭರವಸೆ ನೀಡಿದರು. ಎಂ. ಶ್ರೀಲತಾ ಮತ್ತು ಶೋಭನ್ ರೆಡ್ಡಿ ಅವರು ಫೆಬ್ರವರಿ 13 ರಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರನ್ನು ಭೇಟಿ ಮಾಡಿದ್ದರು.
ಶೋಭನ್ ರೆಡ್ಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸಿಕಂದರಾಬಾದ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನಲ್ಲಿ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಲತಾ ಅವರು ಈ ತಿಂಗಳು ಕಾಂಗ್ರೆಸ್ ಸೇರಿದ ಹೈದರಾಬಾದ್ನ ಎರಡನೇ ಬಿಆರ್ಎಸ್ ನಾಯಕಿಯಾಗಿದ್ದಾರೆ.