ತಿರುವನಂತಪುರಂ (ಕೇರಳ):ಜೀವ ಮತ್ತು ಆಸ್ತಿಪಾಸ್ತಿಗೆ ಬೆದರಿಕೆಯೊಡ್ಡುವ ಕಾಡುಪ್ರಾಣಿಗಳ ದಾಳಿಯ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಹೆಚ್ಚುತ್ತಿವೆ. ಇದರ ನಡುವೆಯೂ ರಾಜ್ಯ ಅರಣ್ಯ ಇಲಾಖೆಯ ಇತ್ತೀಚಿನ ಮಾಹಿತಿಯು ಎಲ್ಲರಿಗೆ ಅಚ್ಚರಿ ಮೂಡಿಸಿದೆ. ಕಳೆದ ಮೂರು ವರ್ಷಗಳಲ್ಲಿ ಮಾನವ-ಪ್ರಾಣಿ ಸಂಘರ್ಷಗಳ ಸಂಖ್ಯೆಯನ್ನು ಅರಣ್ಯ ಇಲಾಖೆ ಬಹಿರಂಗಪಡಿಸಿದ್ದು, ಮಾನವರ ಸಾವಿನ ಸಂಖ್ಯೆಯಲ್ಲಿ ಗಮನಾರ್ಹವಾಗಿ ಇಳಿಕೆ ಕಂಡುಬಂದಿದೆ.
ಮಾಧ್ಯಮಕ್ಕೆ ಲಭ್ಯವಿರುವ ಅರಣ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, 2023-2024ರ ಅವಧಿಯಲ್ಲಿ ಕೇರಳದಲ್ಲಿ ಆನೆಗಳ ದಾಳಿಯಿಂದ ಸಾವನ್ನಪ್ಪಿದವರ ಸಂಖ್ಯೆ 2021-2022ರಲ್ಲಿ ದಾಖಲಾದ ಸಂಖ್ಯೆಗಿಂತ ಕಡಿಮೆಯಾಗಿದೆ. ಅಂಕಿಅಂಶಗಳ ಪ್ರಕಾರ, 2023-2024ರಲ್ಲಿ ಕೇರಳದಲ್ಲಿ ಆನೆ ದಾಳಿಯಲ್ಲಿ 17 ಜನರು ಸಾವನ್ನಪ್ಪಿದ್ದರೆ, 2022-2023ರಲ್ಲಿ 27 ಜನರು ಮತ್ತು 2021-2022ರಲ್ಲಿ 35 ಜನರು ಬಲಿಯಾಗಿದ್ದಾರೆ.
ಮಾನವ-ಪ್ರಾಣಿ ಸಂಘರ್ಷಕ್ಕೆ ಒಡಿಶಾ, ಜಾರ್ಖಂಡ್ ಮತ್ತು ಕರ್ನಾಟಕದಂತಹ ರಾಜ್ಯಗಳಿಗೆ ಹೋಲಿಸಿದರೆ ಈ ಸಂಖ್ಯೆ ತುಂಬಾ ಕಡಿಮೆ ಆಗಿದೆ. ಜಾರ್ಖಂಡ್‌ನ ಅರಣ್ಯ ಇಲಾಖೆ ಮೂಲಗಳ ಪ್ರಕಾರ ಪ್ರತಿ ವರ್ಷ ಸರಾಸರಿ 100ಕ್ಕೂ ಹೆಚ್ಚು ಮಂದಿ ಆನೆ ದಾಳಿಗೆ ಬಲಿಯಾಗುತ್ತಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆಯ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಮಾನವ-ಆನೆ ಸಂಘರ್ಷದಿಂದ 148 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.