ಕರ್ನಾಟಕ

karnataka

ETV Bharat / bharat

ಸಮೋಸಾ ನಾಪತ್ತೆಗೆ ಸಿಐಡಿ ತನಿಖೆ: 'ಸಮೋಸಾ' ಮೆರವಣಿಗೆ ನಡೆಸಿ ವ್ಯಂಗ್ಯವಾಡಿದ ಬಿಜೆಪಿ - CID SAMOSA INVESTIGATION

ಹಿಮಾಚಲಪ್ರದೇಶದಲ್ಲಿ ಸಿಎಂಗಾಗಿ ತರಿಸಿದ್ದ ಸಮೋಸಾ ನಾಪತ್ತೆ ಸಿಐಡಿ ತನಿಖೆಯು ನಗೆಪಾಟಲಿಗೀಡಾಗಿದ್ದು, ವಿಪಕ್ಷ ಬಿಜೆಪಿ ತಿಂಡಿಯನ್ನು ಮೆರವಣಿಗೆ ಮಾಡಿ ಅಣಕವಾಡಿದೆ.

samosa march
ಬಿಜೆಪಿಯಿಂದ ಮೆರವಣಿಗೆ (ANI)

By ANI

Published : Nov 9, 2024, 5:14 PM IST

ಶಿಮ್ಲಾ (ಹಿಮಾಚಲ ಪ್ರದೇಶ):ಸಿಎಂ ಸುಖ್ವಿಂದರ್ ಸಿಂಗ್ ಸುಖು ಅವರಿಗಾಗಿ ತರಿಸಿದ್ದ 'ಸಮೋಸಾ ನಾಪತ್ತೆ' ಪ್ರಕರಣ ಹಿಮಾಚಲಪ್ರದೇಶ ಸೇರಿ ದೇಶದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೇ ಬಳಸಿಕೊಂಡ ವಿಪಕ್ಷ ಬಿಜೆಪಿ ಸಮೋಸಾ ಮೆರವಣಿಗೆ ಮಾಡಿ ವ್ಯಂಗ್ಯವಾಡಿದೆ.

ರಾಜಧಾನಿ ಶಿಮ್ಲಾದಲ್ಲಿ ಸಿಎಂ ಅವರ ಫೋಟೋಗೆ ಸಮೋಸಾ ತಿನ್ನುವಂತೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಅಣಕವಾಡಿದ್ದಾರೆ. ಆದರೆ, 'ಇದೊಂದು ಸಣ್ಣ ವಿಚಾರ. ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ತನಿಖೆ ನಡೆಸಲಾಗುತ್ತಿದೆಯೇ ಹೊರತು ಸಮೋಸಾ ನಾಪತ್ತೆ ಕುರಿತು ಅಲ್ಲ' ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹೇಳೋದೇನು?:ಸಮೋಸಾ ನಾಪತ್ತೆ ಕುರಿತು ಸಿಐಡಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದು ಸುಳ್ಳು. ಇದು ಸಿಬ್ಬಂದಿಯ ಬೇಜವಾಬ್ದಾರಿತನದ ಮೇಲೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ, ಇದು ಸಿಐಡಿಯ ಆಂತರಿಕ ವಿಷಯ. ಇದರಲ್ಲಿ ರಾಜಕೀಯ ಮಾಡಬಾರದು ಎಂದು ಸಿಐಡಿ ಉಪ ಜನರಲ್ ಸಂಜೀವ್ ರಂಜನ್ ಓಜಾ ಹೇಳಿದ್ದಾರೆ.

ಮೇಲಾಗಿ, ಸಿಎಂ ಸಮೋಸಾ ತಿನ್ನುವುದಿಲ್ಲ. ಈ ಕುರಿತು ಯಾರಿಗೂ ನೋಟಿಸ್ ನೀಡಿಲ್ಲ, ಏನಾಯಿತು ಎಂದು ತಿಳಿದುಕೊಳ್ಳಲು ಹೇಳಿದ್ದೇವೆ. ಸರ್ಕಾರಕ್ಕೂ, ಈ ತನಿಖೆಗೂ ಸಂಬಂಧವಿಲ್ಲ. ಈ ಮಾಹಿತಿ ಹೇಗೆ ಸೋರಿಕೆಯಾಗಿದೆ ಎಂಬುದನ್ನು ಪತ್ತೆ ಮಾಡಲಾಗುವುದು ಎಂದು ಓಜಾ ಹೇಳಿದರು.

ಸಿಎಂ ಸುಖು ಪ್ರತಿಕ್ರಿಯೆ:ಸಮೋಸಾ ನಾಪತ್ತೆ ಬಗ್ಗೆ ಸಿಐಡಿ ತನಿಖೆ ನಡೆಸಲಾಗುತ್ತಿದೆ ಎಂಬ ವಿಚಾರ ಹರಡುತ್ತಿದ್ದಂತೆ ಪ್ರತಿಕ್ರಿಯಿಸಿರುವ ಸಿಎಂ ಸುಖ್ವಿಂದರ್​ ಸಿಂಗ್​ ಸುಖು, ಪೊಲೀಸರ ತನಿಖೆಯು ಸಿಬ್ಬಂದಿಯ ಅನುಚಿತ ವರ್ತನೆಗೆ ಸಂಬಂಧಿಸಿದ್ದಾಗಿದೆ ಎಂದರಲ್ಲದೆ, ಸಮೋಸಾ ವಿವಾದ ಸೃಷ್ಟಿಯಾಗಿದ್ದಕ್ಕೆ ಮಾಧ್ಯಮಗಳನ್ನು ದೂಷಿಸಿದರು.

''ಸಮೋಸಾ ನಾಪತ್ತೆಯಾದ ಬಗ್ಗೆ ಯಾವುದೇ ತನಿಖೆ ನಡೆಯುತ್ತಿಲ್ಲ. ಅಧಿಕಾರಿ, ಸಿಬ್ಬಂದಿಯ ದುರ್ವರ್ತನೆಯ ಮೇಲೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಮಾಧ್ಯಮಗಳು 'ಸಮೋಸಾ' ಬಗ್ಗೆ ಸುದ್ದಿ ಮಾಡುತ್ತಿವೆ. ನಡೆದ ವಿಷಯವೇ ಬೇರೆ'' ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

ಆಗಿದ್ದೇನು?:ಅ.21ರಂದು ಸಿಎಂ ಜೊತೆಗಿನ ಚಹಾ ಕೂಟಕ್ಕಾಗಿ ಐಜಿಪಿ ಅವರು ಪೊಲೀಸ್​ ಅಧಿಕಾರಿಗೆ ಪ್ರತಿಷ್ಠಿತ ಹೋಟೆಲ್​ನಿಂದ ಸಮೋಸಾ ತರುವಂತೆ ಸೂಚಿದ್ದರು. ಅದರಂತೆ ಸಬ್​ಇನ್ಸ್​ಪೆಕ್ಟರ್, ಎಎಸ್​ಐ ಮತ್ತು ಸಿಬ್ಬಂದಿಯೊಬ್ಬರು ಹೋಟೆಲ್​ನಿಂದ ಮೂರು ಬಾಕ್ಸ್​ಗಳಲ್ಲಿ ಸಮೋಸಾ ಮತ್ತು ಕೇಕ್​ ತರಿಸಿದ್ದರು.

ಬಳಿಕ ಎಸ್ಐ ಈ ಮೂರು ಬಾಕ್ಸ್‌ಗಳನ್ನು ತೆಗೆದುಕೊಂಡು ಹೋಗಿ ರಿಸೆಪ್ಷನ್​ನಲ್ಲಿದ್ದ ಮಹಿಳಾ ಇನ್ಸ್‌ಪೆಕ್ಟರ್‌ಗೆ ಸಿಎಂ ಸಾಹೇಬರಿಗೆ ಸಮೋಸಾ ತಂದಿರುವುದಾಗಿ ಹೇಳಿದ್ದಾರೆ. ಅದಕ್ಕೆ ಅವರು ಈ ಮೂರು ಬಾಕ್ಸ್‌ಗಳನ್ನು ಸಿಐಡಿ ಕಚೇರಿಯಲ್ಲಿ ಇಡುವಂತೆ ಸೂಚಿದ್ದರು. ಆದರೆ, ಈ ಸಮೋಸಾಗಳು ಚಹಾ ಕೂಟಕ್ಕೆ ತಲುಪಿಲ್ಲ. ಈ ಸಂಬಂಧ ಸಿಐಡಿ ಪೊಲೀಸ್ ಮಹಾನಿರೀಕ್ಷಕರು ಅ.21ರಂದು ತನಿಖೆಗೆ ಆದೇಶಿಸಿದ್ದರು. ಡಿಎಸ್​ಪಿ ಶ್ರೇಣಿಯ ಅಧಿಕಾರಿ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಐಜಿಗೆ ಸಲ್ಲಿಸಿದ್ದರು. ವರದಿಯಲ್ಲಿ ಎಸ್‌ಐ ಮತ್ತು ಹೆಡ್ ಕಾನ್‌ಸ್ಟೆಬಲ್ ಎಡವಟ್ಟು ಮಾಡಿಕೊಂಡು ಐಜಿ, ಸಿಐಡಿ ಕಚೇರಿಯಲ್ಲಿದ್ದ ಭದ್ರತಾ ಸಿಬ್ಬಂದಿಗೆ ಸಮೋಸಾ ಹಂಚಿರುವ ಅಂಶ ಗೊತ್ತಾಗಿದೆ. ಜೊತೆಗೆ, ಈ ವರದಿಯಲ್ಲಿ ಸಿಎಂ ಸಮೋಸಾ ತಿಂದ ಪ್ರಕರಣವನ್ನು ಸರ್ಕಾರ ವಿರೋಧಿ ಕೃತ್ಯ ಎಂದು ಬಣ್ಣಿಸಲಾಗಿದೆ.

ಇದನ್ನೂ ಓದಿ:ಸಿಎಂಗಾಗಿ ತರಿಸಿದ್ದ ಸಮೋಸಾ, ಕೇಕ್​ಗಳು ಮಂಗಮಾಯ: CID ತನಿಖೆಗೆ ಆದೇಶಿಸಿದ ಹಿಮಾಚಲ ಸರ್ಕಾರ!

ABOUT THE AUTHOR

...view details