ನವದೆಹಲಿ: ವಿವಾದಿತ ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಬಂಧನವಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಇದರ ಬೆನ್ನಲ್ಲೆ ಜಾರಿ ನಿರ್ದೇಶನಾಲಯದ (ಇಡಿ) ತಂಡವು ಸರ್ಚ್ ವಾರಂಟ್ ಸಮೇತವಾಗಿ ಸಿಎಂ ನಿವಾಸಕ್ಕೆ ಭೇಟಿ ನೀಡಿ, ಬಂಧಿಸಿದ್ದಾರೆ.
ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ಸಿಎಂ ಅಧಿಕೃತ ನಿವಾಸಕ್ಕೆ ಇಂದು ಸಂಜೆ ಇಡಿ ಅಧಿಕಾರಿಗಳ ತಂಡ ಆಗಮಿಸಿತ್ತು. ಈ ತಂಡವು ಕೇಜ್ರಿವಾಲ್ ಮನೆಗೆ ತಲುಪುತ್ತಿದ್ದಂತೆ ದೆಹಲಿ ಪೊಲೀಸರು ಭದ್ರತೆ ಹೆಚ್ಚಿಸಿದ್ದರು. ಸಿಎಂ ಬಂಧನದ ಬಗ್ಗೆ ಖಚಿತವಾಗುತ್ತಿದಂತೆ ಆಪ್ ಕಾರ್ಯಕರ್ತರು ಬಂದು ಸೇರಿದ್ದರು. ಈ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಕೇಜ್ರಿವಾಲ್ ವಿರುದ್ಧ ಬಲವಂತದ ಕ್ರಮದಿಂದ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೇವಲ ಗಂಟೆಗಳಲ್ಲೇ ಈ ಬೆಳವಣಿಗೆ ನಡೆದಿದೆ. ಇಡಿ ಅಧಿಕಾರಿಗಳ ಮಾಹಿತಿ ಪ್ರಕಾರ, ಇಡಿ ತಂಡವು ಸಮನ್ಸ್ ನೀಡಲು ಕೇಜ್ರಿವಾಲ್ ನಿವಾಸಕ್ಕೆ ತೆರಳಿತ್ತು. ಅಲ್ಲದೇ, ತಮ್ಮ ಬಳಿ ಸರ್ಚ್ ವಾರಂಟ್ ಇದೆ ಎಂದು ಸಿಎಂ ನಿವಾಸದ ಸಿಬ್ಬಂದಿಗೆ ತಂಡ ತಿಳಿಸಿತ್ತು.
2021-22ರ ದೆಹಲಿ ಸರ್ಕಾರವು ಹೊಸ ಅಬಕಾರಿ ನೀತಿಯನ್ನು ರೂಪಿಸಿತ್ತು. ಆದರೆ, ಇದನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ನಡೆದಿದೆ ಎಂದು ಆರೋಪಿಸಲಾಗಿದೆ. ಈ ಆರೋಪಗಳು ಕಾರಣದಿಂದಲೇ ನೀತಿಯನ್ನೇ ರದ್ದುಗೊಳಿಸಲಾಗಿದೆ. ಆದರೆ, ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಸಂಬಂಧ ಕೇಂದ್ರದ ತನಿಖಾ ಸಂಸ್ಥೆಗಳಾದ ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿವೆ.