ಚಂಡೀಗಢ (ಹರಿಯಾಣ):ಹರಿಯಾಣ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದ ಬಿಜೆಪಿ-ಜೆಜೆಪಿ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿದೆ. ಈ ನಿರ್ಣಯವನ್ನು ಸ್ಪೀಕರ್ ಗಿಯಾನ್ ಚಂದ್ ಗುಪ್ತಾ ಅಂಗೀಕರಿಸಿದ್ದು, ಇಂದು ಸದನದಲ್ಲಿ ಚರ್ಚೆ ಕೈಗೆತ್ತಿಕೊಳ್ಳಲಾಗಿದೆ.
ಖಟ್ಟರ್ ನೇತೃತ್ವದ ಸಚಿವ ಸಂಪುಟದ ವಿರುದ್ಧ ಅವಿಶ್ವಾಸ ನಿರ್ಣಯದ ಬಗ್ಗೆ ಕಾಂಗ್ರೆಸ್ ನೀಡಿದ ನೋಟಿಸ್ಅನ್ನು ಸ್ಪೀಕರ್ ಒಪ್ಪಿಕೊಂಡಿದ್ದಾರೆ. ಇದರ ಮೇಲೆ ಚರ್ಚೆಗೆ ಎರಡು ಗಂಟೆಗಳ ಕಾಲ ಸಮಯ ಮೀಸಲಿಟ್ಟಿದ್ದಾರೆ. ಪ್ರತಿಪಕ್ಷದ ನಾಯಕರಾದ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಇತ್ತೀಚೆಗೆ ಖಟ್ಟರ್ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದರು. ಅಲ್ಲದೇ, ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯವನ್ನು ಮಂಡಿಸಲಿದೆ ಎಂದು ಅವರು ಹೇಳಿದ್ದರು.
ಮೂರು ವರ್ಷಗಳ ಹಿಂದೆಯೂ ಬಿಜೆಪಿ-ಜೆಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ಗೊತ್ತುವಳಿ ಮಂಡಿಸಿತ್ತು. ಆದರೆ, ಅದು ಫಲಕೊಟ್ಟಿರಲಿಲ್ಲ. ಪ್ರಸ್ತುತ 90 ಸದಸ್ಯರ ಬಲದ ಸದನದಲ್ಲಿ ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, ಮೈತ್ರಿ ಪಕ್ಷವಾದ ಜನನಾಯಕ ಜನತಾ ಪಾರ್ಟಿ (ಜೆಜೆಪಿ) 10 ಶಾಸಕರನ್ನು ಹೊಂದಿದೆ. ಅಲ್ಲದೇ, ಏಳು ಜನ ಪಕ್ಷೇತರ ಶಾಸಕರಲ್ಲಿ ಆರು ಮಂದಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದದ್ದಾರೆ.