ನವದೆಹಲಿ:I.N.D.I.A ಕೂಟದ ಭಾಗವಾಗಿರುವ ಕಾಂಗ್ರೆಸ್ ಮತ್ತು ಆಪ್ (ಎಎಪಿ) ಪಕ್ಷಗಳು ಹರಿಯಾಣ ವಿಧಾನಸಭೆ ಚುನಾವಣೆಯಲ್ಲೂ ಮೈತ್ರಿಗೆ ಮುಂದಾಗಿದ್ದು, ಸೀಟು ಹಂಚಿಕೆಯಲ್ಲಿ ಗೊಂದಲ ಉಂಟಾಗಿದೆ. ಆಪ್ ಬೇಡಿಕೆ ಇಟ್ಟಷ್ಟು ಸೀಟುಗಳನ್ನು ನೀಡಲು ಕಾಂಗ್ರೆಸ್ ಒಪ್ಪದ ಕಾರಣ, ಮೈತ್ರಿ ಒಗ್ಗೂಡುವ ಬಗ್ಗೆ ಅನುಮಾನಗಳು ಮೂಡಿವೆ.
ನಮ್ಮನ್ನು ಚಿಕ್ಕ ಪಕ್ಷ ಎಂದು ಕಡೆಗಣಿಸಬೇಡಿ. ಮುಂದೆ ನೀವೇ ಪಶ್ಚಾತ್ತಾಪ ಪಡುತ್ತೀರಿ ಎಂದು ಆಪ್ ಹೇಳಿದ್ದರೆ, ಸೀಟು ಹಂಚಿಕೆ ಬಗ್ಗೆ ಇನ್ನೂ ಮಾತುಕತೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಎರಡೂ ಪಕ್ಷಗಳ ನಡುವೆ ಮೈತ್ರಿ ಮಾಡಿಕೊಳ್ಳುವ ಅನಿಶ್ಚಿತತೆ ಮಾತ್ರ ಮುಂದುವರೆದಿದೆ.
ಎಎಪಿ ರಾಷ್ಟ್ರೀಯ ಕಾರ್ಯದರ್ಶಿ ಸಂದೀಪ್ ಪಾಠಕ್ ಮಾಧ್ಯಮಗಳ ಮುಂದೆ ಮಾತನಾಡಿ, ಹರಿಯಾಣ ವಿಧಾನಸಭೆಯ ಎಲ್ಲಾ 90 ಸ್ಥಾನಗಳಲ್ಲಿ ಪಕ್ಷವು ಸ್ಪರ್ಧಿಸಲು ಸಿದ್ಧವಾಗಿದೆ. ಮೈತ್ರಿ ಮತುಕತೆಗಳು ನಡೆಯುತ್ತಿವೆ. ಆಪ್ ಚಿಕ್ಕ ಪಕ್ಷ ಎಂದು ಕಡೆಗಣಿಸಬೇಡಿ. ಇದಕ್ಕೆ ಮುಂದೆ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಕಾಂಗ್ರೆಸ್ಗೆ ಪರೋಕ್ಷವಾಗಿ ತಿವಿದರು.
"ನಾವು ಪೂರ್ಣ ಬದಲದಿಂದ ಚುನಾವಣಾ ಕಣಕ್ಕಿಳಿಯಲು ಸಿದ್ಧರಿದ್ದೇವೆ. ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಮುಂದುವರಿಯಿರಿ ಎಂದು ಆದೇಶ ಬಂದ ಬಳಿಕ ಎಲ್ಲಾ 90 ಸ್ಥಾನಗಳಲ್ಲಿ ಚುನಾವಣೆಯನ್ನು ಎದುರಿಸುತ್ತೇವೆ. ಪಕ್ಷದ ಬಗ್ಗೆ ಕಡಿಮೆ ಅಂದಾಜು ಮಾಡುವವರು ಭವಿಷ್ಯದಲ್ಲಿ ಪೇಚಾಡಬೇಕಾಗುತ್ತದೆ ಎಂದು ಪಾಠಕ್ ಹೇಳಿದರು.
ಕಾಂಗ್ರೆಸ್ ನಿಲುವೇನು?:ಆಪ್ ಜೊತೆಗಿನ ಮೈತ್ರಿ ಮಾತುಕತೆಗಳು ಇನ್ನೂ ನಡೆಯುತ್ತಿವೆ. ಈ ಬಗ್ಗೆ ಯಾವುದೇ ನಿಲುವು ಅಥವಾ ಪ್ರತ್ಯೇಕ ಸ್ಪರ್ಧೆ ಬಗ್ಗೆ ನಿರ್ಧಾರವಾಗಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಪಕ್ಷ ನಾಯಕ ಪ್ರಮೋದ್ ತಿವಾರಿ ಅವರು, ಮಿತ್ರ ಪಕ್ಷಗಳ ನಡುವೆ ಇನ್ನೂ ಮಾತುಕತೆ ಜಾರಿಯಲ್ಲಿದೆ. ಹಾಗೊಂದು ವೇಳೆ ಯಾವುದೂ ಸ್ಪಷ್ಟವಾಗದಿದ್ದಲ್ಲಿ ಎರಡೂ ಪಕ್ಷಗಳು ಪ್ರತ್ಯೇಕವಾಗಿ 90 ಸ್ಥಾನಗಳಲ್ಲಿ ಸ್ಪರ್ಧೆ ಮಾಡಲಿವೆ ಎಂದರು.
ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಎರಡಂಕಿ ಸ್ಥಾನಗಳನ್ನೂ ಪಡೆಯುವುದಿಲ್ಲ. ಕುಸ್ತಿಪಟುಗಳಾದ ಭಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಕಾಂಗ್ರೆಸ್ ಸೇರುವ ಬಗ್ಗೆ ಪ್ರತಿ ನಾಯಕರಿಗೂ ಮಾಹಿತಿ ನೀಡಲಾಗಿದೆ. ಅವರ ಹೋರಾಟದ ವೇಳೆ ಬಿಜೆಪಿ ಬೆಂಬಲಿಸದ ಕಾರಣ, ಕುಸ್ತಿಪಟುಗಳು ಕಾಂಗ್ರೆಸ್ ಸೇರಿದ್ದಾರೆ ಎಂದರು.
ಮೈತ್ರಿಗೆ ಅಡ್ಡಿಯಾಗಿದ್ದೇನು?:ದೆಹಲಿ, ಪಂಜಾಬ್ನಲ್ಲಿ ಅಧಿಕಾರಲ್ಲಿರುವ ಆಮ್ ಆದ್ಮಿ ಪಕ್ಷ (ಆಪ್) ನೆರೆಯ ರಾಜ್ಯವಾದ ಹರಿಯಾಣದಲ್ಲಿ ಬೇರೂರಲು ಯತ್ನಿಸುತ್ತಿದೆ. ಇದರ ಭಾಗವಾಗಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡರೂ, 90 ಸ್ಥಾನಗಳ ಪೈಕಿ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ. ಆದರೆ, ಇದಕ್ಕೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿಲ್ಲ. 5 ರಿಂದ 7 ಸ್ಥಾನಗಳನ್ನು ಬಿಟ್ಟುಕೊಡುವುದಾಗಿ ಹೇಳಿದೆ. ಆದರೆ, ಇದಕ್ಕೆ ಆಪ್ ಸಮ್ಮತಿಸಿಲ್ಲ. ಹೀಗಾಗಿ ಹೊಂದಾಣಿಕೆ ಸ್ಪಷ್ಟವಾಗುತ್ತಿಲ್ಲ.
ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 12 ಆಗಿದೆ. ಅಕ್ಟೋಬರ್ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ:ಹರಿಯಾಣ ವಿಧಾನಸಭೆ ಮತದಾನ ದಿನಾಂಕ ಬದಲು; ಎಣಿಕೆ ಯಾವಾಗ ಗೊತ್ತಾ? - HARYANA ELECTION DATES change