ಬಲಿಯಾ (ಉತ್ತರಪ್ರದೇಶ):ಗೆಳತಿ ಮದುವೆಗೆ ಒಪ್ಪಲಿಲ್ಲ ಅಥವಾ ಅವಳ ಮದುವೆ ಬೇರೆಯವರೊಂದಿಗೆ ನಿಶ್ಚಯವಾಗಿದ್ದ ಸಂದರ್ಭಗಳಲ್ಲಿ ಸಿಟ್ಟಿಗೆದ್ದ ಪ್ರೇಮಿಗಳು ಗೆಳತಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಘಟನೆಗಳು ನಡೆದಿವೆ. ಆದರೆ, ಜಿಲ್ಲೆಯಲ್ಲಿ ವ್ಯತಿರಿಕ್ತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿ ವರನಾಗಿರುವ ತನ್ನ ಪ್ರಿಯಕರನ ಮುಖದ ಮೇಲೆ ಗೆಳತಿ ಆ್ಯಸಿಡ್ ಎರಚಿದ್ದಾಳೆ.
ನಡೆದಿದ್ದೇನು?: ಈ ಪ್ರಕರಣ ಜಿಲ್ಲೆಯ ಬನ್ಸ್ದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ದುಮ್ರಿಯಲ್ಲಿ ನಡೆದಿದೆ. ಇಲ್ಲಿ ಮಂಗಳವಾರ ಸಂಜೆ ಮದುವೆ ಮೆರವಣಿಗೆಯೊಂದಿಗೆ ತೆರಳುತ್ತಿದ್ದ ವರನ ಮೇಲೆ ಆತನ ಗೆಳತಿ ಆ್ಯಸಿಡ್ ಎರಚಿದ್ದಾಳೆ. ಈ ಘಟನೆಯ ನಂತರ ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ಉಂಟಾಯಿತು. ಕುಟುಂಬಸ್ಥರು ವರನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಆ್ಯಸಿಡ್ ಎರಚಿದ ಯುವತಿಗೆ ವರನ ಮನೆಯ ಮಹಿಳೆಯರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯುವಕ ಹಾಗೂ ಯುವತಿ ಇಬ್ಬರೂ ಕೆಲ ದಿನಗಳಿಂದ ಪ್ರೀತಿಸುತ್ತಿದ್ದರು. ಇದಕ್ಕೆ ಇಬ್ಬರ ಕುಟುಂಬದಿಂದಲೂ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದರ ಹೊರತಾಗಿಯೂ, ಪ್ರೀತಿಸುತ್ತಿದ್ದ ಜೋಡಿ ಪರಸ್ಪರ ಒಟ್ಟಿಗೆ ಬದುಕಲು ಹಠ ಹಿಡಿದಿದ್ದರು. ಈ ಬಗ್ಗೆ ಉಭಯ ಕುಟುಂಬಗಳ ನಡುವೆ ಪಂಚಾಯ್ತಿ ಕೂಡ ನಡೆದಿದ್ದು, ನಂತರ ಪರಸ್ಪರ ಒಪ್ಪಿಗೆ ಮೇರೆಗೆ ವಿಷಯವನ್ನು ಬಗೆಹರಿಸಲಾಗಿತ್ತು. ಕೆಲ ತಿಂಗಳಗಳ ಬಳಿಕ ಯುವಕನ ಕುಟುಂಬಸ್ಥರು ಆತನ ಮದುವೆಯನ್ನು ನಿಶ್ಚಯಿಸಿದ್ದರು.