ಚೆನ್ನೈ: ಮೆಟ್ಟೂರು ಜಲಾಶಯಕ್ಕೆ ನೀರಿನ ಒಳಹರಿವು ಕಡಿಮೆಯಾಗಿರುವ ಮಧ್ಯೆ ಕಾವೇರಿ ಜಲ ವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರತಿ ತಿಂಗಳು ಕರ್ನಾಟಕದಿಂದ ಕಾವೇರಿ ನೀರು ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ತಮಿಳುನಾಡಿನ ಕಾವೇರಿ ನದಿಪಾತ್ರದ ರೈತರು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿದ ನಾಗಪಟ್ಟಿಣಂನ ರೈತ ಮುಖಂಡ ಉಮೇಶ್ ರಾಜ್, ಕಾವೇರಿ ನೀರಿಗಾಗಿ ತಮಿಳುನಾಡಿನ ಕಾವೇರಿ ನದಿ ಪಾತ್ರದ ಜಿಲ್ಲೆಗಳ ರೈತರು ಬೃಹತ್ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಿದ್ದಾರೆ ಎಂದು ಹೇಳಿದರು.
ಮಾನ್ಸೂನ್ ಮಳೆ ಚೆನ್ನಾಗಿ ಸುರಿದ ಸಂದರ್ಭದಲ್ಲಿ ಕಬಿನಿ ಮತ್ತು ಕೃಷ್ಣರಾಜ ಸಾಗರ (ಕೆಆರ್ ಎಸ್) ಜಲಾಶಯಗಳು ಪೂರ್ಣ ತುಂಬಿದಾಗ ಕರ್ನಾಟಕ ಕಾವೇರಿ ನೀರು ಬಿಡುಗಡೆ ಮಾಡಿತ್ತು.
ಕರ್ನಾಟಕದ ಕಬಿನಿ ಮತ್ತು ಕೃಷ್ಣರಾಜ ಸಾಗರ ಜಲಾಶಯಗಳಿಂದ ನೀರು ಬಿಡುಗಡೆ ಮಾಡಿದಾಗ ಮೆಟ್ಟೂರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಗರಿಷ್ಠ ಸಾಮರ್ಥ್ಯ 120 ಟಿಎಂಸಿ ಅಡಿಗೆ ತಲುಪಿತ್ತು. ನಂತರ ಜಲಾಶಯದಿಂದ ನೀರು ಬಿಡುಗಡೆ ಮಾಡಲಾರಂಭಿಸಿದ ನಂತರ ಗುರುವಾರದ ವೇಳೆಗೆ ಮೆಟ್ಟೂರು ಜಲಾಶಯದಲ್ಲಿ ಕೇವಲ 88 ಟಿಎಂಸಿ ಅಡಿ ನೀರು ಸಂಗ್ರಹವಿದೆ.