ನವದೆಹಲಿ:ಅಬಕಾರಿ ನೀತಿ ಹಗರಣದಲ್ಲಿ ಬಂಧಿತರಾಗಿದ್ದ ಆಮ್ ಆದ್ಮಿ ಪಕ್ಷದ (ಆಪ್) ಮುಖ್ಯಸ್ಥ ಹಾಗು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನೀಡಿತು.
10 ಲಕ್ಷ ರೂ ಬಾಂಡ್, ಎರಡು ಶ್ಯೂರಿಟಿಗಳೊಂದಿಗೆ ಕೇಜ್ರಿವಾಲ್ಗೆ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾ.ಸೂರ್ಯ ಕಾಂತ್ ದ್ವಿಸದಸ್ಯ ನ್ಯಾಯಪೀಠ ಜಾಮೀನು ಮಂಜೂರು ಮಾಡಿದೆ.
ದೆಹಲಿ ಮದ್ಯ ನೀತಿ ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಖಲಿಸಿದ ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಕೇಜ್ರಿವಾಲ್, ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ದ್ವಿದಸ್ಯ ನ್ಯಾಯಪೀಠ, ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಈಗಾಗಲೇ ಜಾಮೀನು ಸಿಕ್ಕಿರುವುದರಿಂದ ಕೇಜ್ರಿವಾಲ್ ಅವರನ್ನು ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು ನ್ಯಾಯದ ಅಪಹಾಸ್ಯವಾಗುತ್ತದೆ ಎಂದು ಅಭಿಪ್ರಾಯಟ್ಟಿತು.
ಕೇಜ್ರಿವಾಲ್ ಬಂಧನ ನ್ಯಾಯಸಮ್ಮತವಲ್ಲ. 22 ತಿಂಗಳುಗಳ ಕಾಲ ಅವರನ್ನು ಸಿಬಿಐ ಬಂಧಿಸಲಿಲ್ಲ. ಆದರೆ, ಇಡಿ ಪ್ರಕರಣದಲ್ಲಿ ಬಿಡುಗಡೆಯಾದ ಬೆನ್ನಲ್ಲೇ ಸಿಬಿಐ ಬಂಧಿಸಿದ ತುರ್ತು ಕ್ರಮ ಅರ್ಥವಾಗುತ್ತಿಲ್ಲ. ಈ ಹಿಂದೆಯೇ ಸಿಬಿಐಗೆ ಪಂಜರದ ಗಿಳಿ ಎಂದು ಕೋರ್ಟ್ ದೂಷಿಸಿತ್ತು. ಅದರಿಂದ ಸಿಬಿಐ ಹೊರಬರಬೇಕಿದೆ ಎಂದು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ತರಾಟೆಗೆ ತೆಗೆದುಕೊಂಡರು. ಆದರೆ ನ್ಯಾ.ಸೂರ್ಯ ಕಾಂತ್ ಅವರು ಸಿಬಿಐ ಕ್ರಮದಲ್ಲಿ ಯಾವುದೇ ಅಕ್ರಮ ಇಲ್ಲ ಎಂದು ತಿಳಿಸಿದರು.