ರಾಮೋಜಿ ಫಿಲಂ ಸಿಟಿ(ಹೈದರಾಬಾದ್):ಮಾಧ್ಯಮ ಲೋಕದ ದಿಗ್ಗಜ, 'ಈನಾಡು' ಸಮೂಹದ ಅಧ್ಯಕ್ಷ, ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಮೋಜಿ ರಾವ್ (87) ಅವರು ಇಂದು ಪಂಚಭೂತಗಳಲ್ಲಿ ಲೀನರಾದರು. ಜಗತ್ಪ್ರಸಿದ್ಧ ಫಿಲಂ ಸಿಟಿಯ ನಿರ್ಮಾತೃ ರಾಮೋಜಿ ಅವರ ಅಂತ್ಯಕ್ರಿಯೆ ಭಾನುವಾರ 11.30ಕ್ಕೆ ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಕುಟುಂಬ ವರ್ಗ ಹಾಗು ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು.
ರಾಮೋಜಿ ಅವರ ಪುತ್ರ ಹಾಗೂ ಪ್ರಸ್ತುತ ಈನಾಡು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ (ಎಂಡಿ) ಕಿರಣ್ ಅವರು ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನೆರವೇರಿತು. ಇದಕ್ಕೂ ಮುನ್ನ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು.
ಅಂತಿಮ ಯಾತ್ರೆ:ಶನಿವಾರ ಮುಂಜಾನೆ ನಿಧನರಾದ ರಾಮೋಜಿ ರಾವ್ ಅವರ ಅಂತಿಮ ಯಾತ್ರೆ ಬೆಳಗ್ಗೆ 9 ಗಂಟೆಯಿಂದ ಫಿಲಂ ಸಿಟಿ ಆವರಣದಲ್ಲಿರುವ ಅವರ ನಿವಾಸದಿಂದ ಆರಂಭವಾಯಿತು. ಮೆರವಣಿಗೆಯುದ್ದಕ್ಕೂ ಸಾವಿರಾರು ಜನರು ಭಾಗವಹಿಸಿದ್ದರು. ರಾಮೋಜಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದರು.