ನವದೆಹಲಿ:ಮುಸ್ಲಿಂ ಮೀಸಲಾತಿ ಸಂಬಂಧ ಬಿಜೆಪಿ ಹಂಚಿಕೊಂಡಿರುವ ವಿಡಿಯೋ ಆಕ್ಷೇಪಕ್ಕೆ ಕಾರಣವಾಗಿದ್ದು, ಅದನ್ನು ಸಾಮಾಜಿಕ ಜಾಲತಾಣದಿಂದ ತಕ್ಷಣಕ್ಕೆ ಅಳಿಸಿ ಹಾಕಲು ಚುನಾವಣಾ ಆಯೋಗ ಮಂಗಳವಾರ ಎಕ್ಸ್ಗೆ ಸೂಚಿಸಿದೆ. ಇದರ ಬೆನ್ನಲ್ಲೇ, ಅನಿಮೇಟೆಡ್ ವಿಡಿಯೋವನ್ನು ಡಿಲಿಟ್ ಮಾಡಲಾಗಿದೆ.
ರಾಜ್ಯದ 14 ಕ್ಷೇತ್ರಗಳಿಗೆ ಮೇ 7 ರಂದು ನಡೆದ ಎರಡನೇ ಹಂತದ ಮತದಾನದಂದೇ ಚುನಾವಣಾ ಆಯೋಗ ಈ ನಿರ್ದೇಶನ ನೀಡಿದೆ. ಸಾಮಾಜಿಕ ಜಾಲತಾಣ ಎಕ್ಸ್ನ ನೋಡಲ್ ಅಧಿಕಾರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗ, ತ್ವರಿತ ಕ್ರಮಕ್ಕೆ ಸೂಚಿಸಿತ್ತು.
ಮುಸ್ಲಿಮರ ಮೀಸಲಾತಿಯನ್ನು ವೈಭವೀಕರಿಸುವ ವಿಡಿಯೋ ಇದಾಗಿದ್ದು, ಬಿಜೆಪಿ ಕರ್ನಾಟಕ ಘಟಕವು ತನ್ನ ಎಕ್ಸ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿತ್ತು. ಇದು ಕಾನೂನು ಚೌಕಟ್ಟು, ನಿಯಮಗಳನ್ನು ಉಲ್ಲಂಘಿಸುತ್ತದೆ ಎಂದು ಆಯೋಗ ಹೇಳಿದೆ.