ದುರ್ಗ್/ರಾಯಪುರ(ಛತ್ತೀಸ್‌ಗಢ): ಬಸ್ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ. ದುರ್ಗ್ ಜಿಲ್ಲೆಯ ಕೆಡಿಯಾ ಡಿಸ್ಟಿಲರಿಯಲ್ಲಿ ಈ ಅಪಘಾತ ಸಂಭವಿಸಿತ್ತು. ಮಂಗಳವಾರ ರಾತ್ರಿ 30 ಉದ್ಯೋಗಿಗಳನ್ನು ಹೊತ್ತು ಕುಮ್ಹಾರಿಯಿಂದ ಭಿಲಾಯ್‌ಗೆ ಹಿಂತಿರುಗುತ್ತಿದ್ದ ಬಸ್ ಅಪಘಾತಕ್ಕೀಡಾಗಿ ಈ ದುರಂತ ನಡೆದಿತ್ತು. ಮಾಹಿತಿ ತಿಳಿದ ತಕ್ಷಣ ಎಸ್‌ಡಿಆರ್‌ಎಫ್ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದರು. ಈ ದುರಂತದಲ್ಲಿ 12 ಜನರು ಸಾವನ್ನಪ್ಪಿದ್ದಾರೆ, 14 ಮಂದಿ ಗಾಯಗೊಂಡಿದ್ದಾರೆ.
ಕುಮ್ಹಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಖಾಪ್ರಿ ಗ್ರಾಮದ ಬಳಿ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಸಂತ್ರಸ್ತರು ಡಿಸ್ಟಿಲರಿಯಿಂದ ಕೆಲಸ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ದುರ್ಗ್ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಶುಕ್ಲಾ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, 30 ಕ್ಕೂ ಹೆಚ್ಚು ಜನರಿದ್ದ ಬಸ್ ರಸ್ತೆಯಿಂದ ಸ್ಕಿಡ್ ಆಗಿ 40 ಅಡಿ ಆಳದ 'ಮುರುಮ್' ಗಣಿಯ ಕಂದಕಕ್ಕೆ ಉರುಳಿದೆ ಎಂದು ಎಸ್ಪಿ ಜಿತೇಂದ್ರ ಶುಕ್ಲಾ ಮಾಹಿತಿ ನೀಡಿದ್ದಾರೆ. ಅಪಘಾತದಲ್ಲಿ ಮೂವರು ಮಹಿಳೆಯರು ಸೇರಿದಂತೆ 12 ಜನರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ದುರ್ಗ್ ಜಿಲ್ಲಾಧಿಕಾರಿ ರಿಚಾ ಪ್ರಕಾಶ್ ಚೌಧರಿ ಹೇಳಿದ್ದಾರೆ.
ಬಸ್ ಕುಮ್ಹಾರಿ ಪ್ರದೇಶದಲ್ಲಿ ನೆಲೆಗೊಂಡಿರುವ ಕೆಡಿಯಾ ಡಿಸ್ಟಿಲರೀಸ್‌ನ ಕಾರ್ಮಿಕರನ್ನು ಹೊತ್ತೊಯ್ಯುತ್ತಿತ್ತು. ಇದುವರೆಗೆ 12 ಜನರ ಸಾವು ದೃಢಪಟ್ಟಿದೆ. ಗಾಯಗೊಂಡ 14 ಮಂದಿಯಲ್ಲಿ 12 ಮಂದಿಯನ್ನು ರಾಯ್‌ಪುರದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ ದಾಖಲಿಸಲಾಗಿದೆ. ಇನ್ನಿಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶುಕ್ಲಾ ಮಾಹಿತಿ ಒದಗಿಸಿದ್ದಾರೆ.