ನವದೆಹಲಿ : ಸನಾತನ ಧರ್ಮಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗೆ ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ. ನಿಮ್ಮ ಹೇಳಿಕೆಯ ಪರಿಣಾಮಗಳೇನಾಗಬಹುದು ಎಂಬುದು ನಿಮಗೆ ತಿಳಿದಿರಲಿಲ್ಲವೇ ಮತ್ತು ಇದು ಇದು ಆರ್ಟಿಕಲ್ 19 (1) (ಎ) (ವಾಕ್ ಸ್ವಾತಂತ್ರ್ಯದ) ದುರುಪಯೋಗವಲ್ಲವೇ ಎಂದು ಸುಪ್ರೀಂ ಕೋರ್ಟ್ ಅವರನ್ನು ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್ನಲ್ಲಿ ಸ್ಟಾಲಿನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಎ.ಎಂ. ಸಿಂಘ್ವಿ, ತಮ್ಮ ಕಕ್ಷಿದಾರರ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಒಂದೇ ಕಡೆ ಜೋಡಿಸಿ ವಿಚಾರಣೆ ನಡೆಸುವಂತೆ ಆದೇಶಿಸಬೇಕೆಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಮನವಿ ಸಲ್ಲಿಸಿದರು.
ನ್ಯಾಯಮೂರ್ತಿ ದತ್ತಾ ಅವರು ಸ್ಟಾಲಿನ್ ಅವರ ವಕೀಲರಿಗೆ, "ನೀವು ನಿಮ್ಮ ಆರ್ಟಿಕಲ್ 19 (1) (ಎ) ಹಕ್ಕನ್ನು ದುರುಪಯೋಗಪಡಿಸಿಕೊಂಡಿರುವಿರಿ ಮತ್ತು ನಿಮ್ಮ ಆರ್ಟಿಕಲ್ 25 ನೀಡಿರುವ ಹಕ್ಕನ್ನು ಕೂಡ ದುರುಪಯೋಗಪಡಿಸಿಕೊಂಡಿರುವಿರಿ ಅಲ್ಲವೇ? ಈಗ ನೀವು ನಿಮ್ಮ ಆರ್ಟಿಕಲ್ 32ರ ಪ್ರಕಾರ ಹಕ್ಕನ್ನು ಚಲಾಯಿಸುತ್ತಿರುವಿರಿ ಅಲ್ಲವೇ? ನಿಮ್ಮ ಹೇಳಿಕೆಗಳ ಪರಿಣಾಮಗಳೇನಾಗಬಹುದು ಎಂಬುದು ನಿಮಗೆ ತಿಳಿದಿರಲಿಲ್ಲವೇ?" ಎಂದು ನ್ಯಾಯಮೂರ್ತಿ ದತ್ತಾ ಸ್ಟಾಲಿನ್ ಪರ ವಕೀಲರಿಗೆ ಪ್ರಶ್ನಿಸಿದರು.