ಕೋಟಾ(ರಾಜಸ್ಥಾನ):ಕೋಟಾದ ಖಾಸಗಿ ಆಸ್ಪತ್ರೆಯ ವೈದ್ಯರು ಬುಂಡಿ ಜಿಲ್ಲೆಯ ರೋಗಿಯೊಬ್ಬರಿಗೆ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ನಡೆಸಿ, ಅವರ ಪಿತ್ತಕೋಶದಿಂದ 6,110 ಕಲ್ಲುಗಳನ್ನು (Gallstones) ಹೊರತೆಗೆದಿದ್ದಾರೆ.
ರೋಗಿಗೆ ದೀರ್ಘಕಾಲದಿಂದ ಹೊಟ್ಟೆ ನೋವು, ವಾಂತಿ, ಹೊಟ್ಟೆ ಭಾರ ಹಾಗೂ ಇತರ ಆರೋಗ್ಯ ಸಮಸ್ಯೆಗಳಿದ್ದವು. ಕಳೆದ ವಾರ ಅವರು ಕೋಟಾದಲ್ಲಿರುವ ವಿಶೇಷ ಆಸ್ಪತ್ರೆಗೆ ಭೇಟಿ ನೀಡಿದ್ದು, ಅಲ್ಲಿನ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಎಲ್ಲ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.
ಶಸ್ತ್ರಚಿಕಿತ್ಸೆ ನಡೆಸಿದ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಕ ದಿನೇಶ್ ಜಿಂದಾಲ್ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ರೋಗಿ ಬುಂದಿ ಜಿಲ್ಲೆಯ 70 ವರ್ಷದ ರೈತ. ಕೆಲವು ದಿನಗಳ ಹಿಂದೆ ನಮ್ಮ ಬಳಿ ಬಂದಿದ್ದರು. ಆಗ ಅವರಿಗೆ ಸೋನೋಗ್ರಫಿ ಮಾಡಿದ್ದು, ಪಿತ್ತಕೋಶ ಸಂಪೂರ್ಣವಾಗಿ ಕಲ್ಲುಗಳಿಂದ ತುಂಬಿರುವುದು ಹಾಗೂ ಪಿತ್ತಕೋಶದ ಗಾತ್ರ 7x2 ಸೆಂ.ಮೀನಿಂದ 12x4 ಸೆಂ.ಮೀಗೆ ದ್ವಿಗುಣಗೊಂಡಿರುವುದು ಬೆಳಕಿಗೆ ಬಂತು. ಪಿತ್ತಕೋಶದಲ್ಲಿನ ಕಲ್ಲುಗಳನ್ನು ತೆಗೆಯದೇ ಇದ್ದಿದ್ದರೆ ರೋಗಿಗೆ ಭವಿಷ್ಯದಲ್ಲಿ ಗಂಭೀರ ಹಾನಿ ಉಂಟಾಗುತ್ತಿತ್ತು. ಮೇದೋಜೀರಕ ಗ್ರಂಥಿಯ ಉರಿಯೂತ, ಜಾಂಡೀಸ್‌ನಿಂದಲೂ ಬಳಲುವ ಸಾಧ್ಯತೆ ಇತ್ತು. ಮಾತ್ರವಲ್ಲದೇ, ಕ್ಯಾನ್ಸರ್ ಬಾಧೆಯೂ ಇತ್ತು" ಎಂದು ಹೇಳಿದರು.
ಶಸ್ತ್ರಚಿಕಿತ್ಸೆ ವೇಳೆ ಸೋಂಕಿನ ಅಪಾಯ: "ಕೇವಲ 30 ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ರೋಗಿಯ ಪಿತ್ತಕೋಶದಲ್ಲಿದ್ದ ಕಲ್ಲುಗಳಲ್ಲಿ ಹೊರತೆಗೆಯಲಾಯಿತು. ಆದರೆ ಆ ಕಲ್ಲುಗಳನ್ನು ಎಣಿಸಲು ಆಸ್ಪತ್ರೆಯ ಸಿಬ್ಬಂದಿಗೆ ಸುಮಾರು ಎರಡೂವರೆ ಗಂಟೆ ಬೇಕಾಯಿತು. ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಮರುದಿನ ರೋಗಿಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದೇವೆ. ಇದೀಗ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದು, ನಡೆದಾಡುತ್ತಿದ್ದಾರೆ" ಎಂದು ತಿಳಿಸಿದರು.
ಡಾ.ಜಿಂದಾಲ್ ಮಾತನಾಡಿ, "ಪಿತ್ತಕೋಶದ ರಂಧ್ರದಿಂದಾಗಿ ಕಲ್ಲುಗಳು ಹೊಟ್ಟೆಯೊಳಗೆ ಹರಡುವ ಸಾಧ್ಯತೆಯಿದ್ದ ಕಾರಣ, ಸಾಕಷ್ಟು ಎಚ್ಚರಿಕೆ ವಹಿಸಿ ಶಸ್ತ್ರಚಿಕಿತ್ಸೆ ಮಾಡಲಾಯಿತು. ರೋಗಿಗೆ ಸೋಂಕು ತಗುಲುವ ಅಪಾಯವಿತ್ತು. ಅದಕ್ಕಾಗಿಯೇ ಪಿತ್ತಕೋಶವನ್ನು ಎಂಡೋಬ್ಯಾಗ್ನಲ್ಲಿ ಇರಿಸಿ ಕಲ್ಲುಗಳನ್ನು ತೆಗೆಯಲಾಯಿತು" ಎಂದರು.
ಪಿತ್ತಕೋಶದಲ್ಲಿ ಕಲ್ಲುಗಳಿರಲು ಕಾರಣವೇನು?: "ಈ ರೀತಿಯ ಪ್ರಕರಣಗಳಿಗೆ ಆನುವಂಶಿಕ ಸೇರಿದಂತೆ ಹಲವು ಕಾರಣಗಳಿವೆ. ಫಾಸ್ಟ್ ಫುಡ್, ಕೊಬ್ಬಿನ ಆಹಾರ, ತ್ವರಿತ ತೂಕ ನಷ್ಟ ಇದಕ್ಕೆ ಕಾರಣಗಳಾಗುತ್ತವೆ. ರೋಗಿಯ ಸಂಬಂಧಿಕರೊಬ್ಬರಿಗೂ ಇದೇ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪಿತ್ತಕೋಶದಿಂದಲೂ ಹೆಚ್ಚಿನ ಸಂಖ್ಯೆಯ ಕಲ್ಲುಗಳನ್ನು ಹೊರತೆಗೆಯಲಾಗಿತ್ತು. ಹಾಗಾಗಿ ಇವರಿಗೆ ಆನುವಂಶಿಕವಾಗಿ ಬಂದಿದೆ ಎಂದು ತೋರುತ್ತದೆ" ಎಂದು ಮಾಹಿತಿ ನೀಡದರು.
ಇದನ್ನೂ ಓದಿ:ತುಂಡಾಗಿದ್ದ ಕೈಯನ್ನು ಯಶಸ್ವಿಯಾಗಿ ಮರುಜೋಡಿಸಿದ ಶಿವಮೊಗ್ಗ ವೈದ್ಯರು: ಅಪಘಾತದಲ್ಲಿ ಅಂಗಾಂಗ ಕಟ್ ಆದ್ರೆ ಹೀಗೆ ಮಾಡುವಂತೆ ಸಲಹೆ - HAND REATTACHED