ಚೆನ್ನೈ, ತಮಿಳುನಾಡು: ಇವಿಎಂ ಯಂತ್ರಗಳ ಬಗ್ಗೆ ಪ್ರಶ್ನಿಸಿ ಡಿಎಂಕೆ ಮದ್ರಾಸ್ ಹೈಕೋರ್ಟ್‌ನಲ್ಲಿ ಅರ್ಜಿಯೊಂದನ್ನು ಸಲ್ಲಿಕೆ ಮಾಡಿದೆ. ಡಿಎಂಕೆ ಪ್ರತಿನಿಧಿಯಾಗಿ ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್ ಎಸ್ ಭಾರತಿ ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಅರ್ಜಿಯಲ್ಲಿ ಏನಿದೆ?: "1950 ರಿಂದ 1990 ರವರೆಗೆ, ಸಾಂಪ್ರದಾಯಿಕ ವಿಧಾನದಲ್ಲಿ ಕಾಗದದ ಮತಪತ್ರಗಳ ಮೂಲಕ ಚುನಾವಣೆಗಳನ್ನು ನಡೆಸಲಾಗುತ್ತಿತ್ತು. 1982 ರಲ್ಲಿ ಕೇರಳದಲ್ಲಿ ನಡೆದ ಚುನಾವಣೆಯಲ್ಲಿ ಭಾರತದ ಚುನಾವಣಾ ಆಯೋಗವು ಒಂದು ಕ್ಷೇತ್ರದ ಕೆಲವು ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಯಂತ್ರಗಳನ್ನು ಮೊದಲ ಬಾರಿಗೆ ಪರಿಚಯಿಸಿತ್ತು. 1961ರ ನಿಯಮಗಳ ಅಡಿ ನಿರ್ದೇಶನಗಳನ್ನು ನೀಡುವುದಕ್ಕಾಗಿ ಮತ್ತು ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸುವ ನಿರ್ಧಾರವನ್ನು ಜಾರಿಗೆ ತರುವುದಕ್ಕಾಗಿ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಆಯೋಗ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ ಆಗ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು ಎಂಬುದನ್ನು ಗಮನಿಸಬೇಕಾಗಿದೆ.
ಆರ್‌ಪಿ ಕಾಯಿದೆ 195 ರ ತಿದ್ದುಪಡಿ, 1961 ರ ನಿಯಮಗಳಿಗೆ ಸೆಕ್ಷನ್ 49 ಎ ನಿಂದ 49 ಎಕ್ಸ್ ಸೇರಿಸುವ ಮೂಲಕ ತಿದ್ದುಪಡಿ ಮಾಡಲಾಗಿದೆ. ವಿದ್ಯುನ್ಮಾನ ಮತಯಂತ್ರಗಳ ವಿನ್ಯಾಸ (ಇವಿಎಂ) ಮತ್ತು ಎಲೆಕ್ಟ್ರಾನಿಕ್ ಮತಯಂತ್ರಗಳ ಎಣಿಕೆ ಇತ್ಯಾದಿಗಳಿಗೆ ಸಂಬಂಧಿಸಿದ ವಿಷಯಗಳು 1961 ರ ನಿಯಮಗಳ ಸೆಕ್ಷನ್ 49A ನಿಂದ 49X ವರೆಗಿನ ಕಲಂಗಳಲ್ಲಿ ವಿವರಿಸಲಾಗಿದೆ. 1961ರ 49A ನಿಯಮಗಳ ಪ್ರಕಾರ, ವಿದ್ಯುನ್ಮಾನ ಮತಯಂತ್ರವು ನಿಯಂತ್ರಣ ಘಟಕ ಮತ್ತು ಮತಯಂತ್ರ ಘಟಕವನ್ನು ಮಾತ್ರ ಹೊಂದಿರಬೇಕು ಮತ್ತು ಚುನಾವಣಾ ಆಯೋಗವು ಅನುಮೋದಿಸಬಹುದಾದಂತಹ ವಿನ್ಯಾಸವನ್ನು ಹೊಂದಿರಬೇಕು ಎಂದು ಅದರಲ್ಲಿ ವಿವರಣೆ ನೀಡಲಾಗಿದೆ.