ಚೆನ್ನೈ : ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿಗಳ ಸಭೆ ಆಗಸ್ಟ್ 16 ರಂದು ನಡೆಯಲಿದ್ದು, ವಾರ್ಷಿಕ 'ಮುಪ್ಪೆರುಮ್ ವಿಳ' ಆಚರಣೆಯ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಅಲ್ಲದೆ ರಾಜ್ಯದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಿಸುವ ಬಗ್ಗೆಯೂ ಇದೇ ಸಭೆಯಲ್ಲಿ ಚರ್ಚೆಯಾಗಲಿದೆ ಎಂಬ ವದಂತಿಗಳು ದಟ್ಟವಾಗಿವೆ.
ಡಿಎಂಕೆ ಸಂಘಟನಾ ಕಾರ್ಯದರ್ಶಿ ಮತ್ತು ತಮಿಳುನಾಡು ಜಲಸಂಪನ್ಮೂಲ ಸಚಿವ ಎಸ್. ದುರೈಮುರುಗನ್ ಸೋಮವಾರ ತಡರಾತ್ರಿ ನೀಡಿದ ಹೇಳಿಕೆಯಲ್ಲಿ, ಪಕ್ಷದ ಪ್ರಧಾನ ಕಚೇರಿ 'ಅಣ್ಣಾ ಅರಿವಾಲಯಂ' ನಲ್ಲಿ ಸಭೆ ನಡೆಯಲಿದ್ದು, ಅಂದು ಬೆಳಗ್ಗೆ 10.30 ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಸೆಪ್ಟೆಂಬರ್ 15 ರಂದು ಡಿಎಂಕೆ ಸಂಸ್ಥಾಪಕ ಸಿ.ಎನ್. ಅಣ್ಣಾದೊರೈ ಅವರ ಜನ್ಮ ದಿನಾಚರಣೆ, ಸೆಪ್ಟೆಂಬರ್ 16 ರಂದು ಪಕ್ಷದ ಸಂಸ್ಥಾಪನಾ ದಿನ ಮತ್ತು ಸೆಪ್ಟೆಂಬರ್ 17 ರಂದು ದ್ರಾವಿಡ ಸಿದ್ಧಾಂತಿ ಇವಿಎಸ್ ರಾಮಸ್ವಾಮಿ ಪೆರಿಯಾರ್ ಅವರ ಜನ್ಮ ದಿನ ಆಚರಣೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದೆ ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಮುಪೆರುಮ್ ವಿಳ ಕುರಿತು ಚರ್ಚಿಸಲು ಸಭೆ ಕರೆಯಲಾಗಿದ್ದರೂ, ತಮಿಳುನಾಡು ಯುವ ಕಲ್ಯಾಣ ಮತ್ತು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ನೇಮಿಸುವ ಬಗ್ಗೆಯೂ ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ಹೇಳಿವೆ.