ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಜುಲೈ 12, 2024 ರಂದು ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಅವರ ರಾಯಲ್ ವೆಡ್ಡಿಂಗ್ ನಡೆಯಲಿದೆ. ಜುಲೈ 12 ರಂದು "ಶುಭ ವಿವಾಹ", ಜುಲೈ 13 ರಂದು "ಶುಭ್ ಆಶೀರ್ವಾದ" ದಿಂದ ಪ್ರಾರಂಭವಾಗುತ್ತದೆ. ಜುಲೈ 14 ರಂದು "ಮಂಗಲ್ ಉತ್ಸವ"ದೊಂದಿಗೆ ಮುಕ್ತಾಯಗೊಳ್ಳುತ್ತದೆ.
ಮೂರು ದಿನಗಳವರೆಗೆ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಮದುವೆಯ ಕಾರ್ಯಕ್ರಮ ಮೂವರು ದಿನಗಳವರೆಗೆ ಅದ್ಧೂರಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ನಡೆದ ಅತ್ಯಂತ ದುಬಾರಿ, ಅದ್ಧೂರಿ ಮದುವೆಗಳ ತಿಳಿದುಕೊಳ್ಳೋಣ ಬನ್ನಿ.
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ: (ವೆಚ್ಚ ಅಂದಾಜು ಮಾಡಿಲ್ಲ. ಆದ್ರೆ, ದುಬಾರಿ ಮದುವೆ)
2019 ರಲ್ಲಿ, ಮುಕೇಶ್ ಅಂಬಾಯ್ ಮತ್ತು ನೀತಾ ಅವರ ಮೊದಲ ಮಗ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಅವರ ವಿವಾಹದಲ್ಲಿ, ಅತಿರಂಜಿತ ಆಚರಣೆಯು ಸೇಂಟ್ ಮೊರಿಟ್ಜ್‌ನಲ್ಲಿ ಐಷಾರಾಮಿ ಎರಡು ದಿನಗಳ ವಿವಾಹ ಪೂರ್ವ ಕಾರ್ಯಕ್ರಮ ನಡೆದಿತ್ತು. ನಿಕಟ ಸ್ನೇಹಿತರು ಮತ್ತು ಕುಟುಂಬದವರ ವಿಶೇಷ ಹಾಜರಾತಿಯೊಂದಿಗೆ ಜರುಗಿತ್ತು. ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಔತಣಕೂಟವನ್ನು ಆಯೋಜಿಸಲಾಗಿತ್ತು.
ಅಮೀರ್ ಖಾನ್ ಮತ್ತು ಅವರ ಪತ್ನಿ, ನಟ ಜಾಕಿ ಶ್ರಾಫ್ ಮತ್ತು ಮನೀಶ್ ಮಲ್ಹೋತ್ರಾ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು, ಹಾಗೆಯೇ ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ-ಮೂನ್ ಮತ್ತು ಅವರ ಪತ್ನಿ ಯೂ ಸೂನ್-ಟೇಕ್ ಮತ್ತು ಬ್ರಿಟಿಷ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮತ್ತು ಅವರ ಪತ್ನಿ ಚೆರಿ ಬ್ಲೇರ್ ಅವರಂತಹ ಅಂತಾರಾಷ್ಟ್ರೀಯ ಗಣ್ಯರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್:(ಅಂದಾಜು ₹700 ಕೋಟಿ)
ಮುಕೇಶ್ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಉದ್ಯಮಿ ಆನಂದ್ ಪಿರಾಮಲ್ ಅವರನ್ನು ಡಿಸೆಂಬರ್ 12, 2018 ರಂದು ಮುಂಬೈನಲ್ಲಿ ಅದ್ಧೂರಿಯಾಗಿ ವಿವಾಹವಾದರು. ವರದಿಗಳ ಪ್ರಕಾರ, ಇಶಾ ತನ್ನ ಮದುವೆ ದಿನದಂದು ₹90 ಕೋಟಿ ವೆಚ್ಚದ ಸುಂದರವಾದ ಲೆಹೆಂಗಾವನ್ನು ಧರಿಸಿದ್ದಳು. ಇದು ವಿಶ್ವದ ಅತ್ಯಂತ ದುಬಾರಿ ಲೆಹೆಂಗಾ ಆಗಿತ್ತು. ಜಾಗತಿಕ ಸೂಪರ್‌ಸ್ಟಾರ್‌ಗಳ ಪ್ರದರ್ಶನಗಳನ್ನು ಒಳಗೊಂಡಿರುವ ಉದಯಪುರ, ಇಟಲಿಯ ಲೇಕ್ ಕೊಮೊ ಮತ್ತು ಮುಂಬೈನಲ್ಲಿ ಅದ್ಧೂರಿ ಕಾರ್ಯಕ್ರಮಗಳು ನಡೆದವು ಮತ್ತು ವಿವಾಹ ಸಮಾರಂಭವು ಪಿಚೋಲಾ ಸರೋವರದ ಖಾಸಗಿ ದ್ವೀಪದಲ್ಲಿ ನಡೆದಿತ್ತು.
ಸುಶಾಂತೋ ರಾಯ್ ಮತ್ತು ಸೀಮಂತೋ ರಾಯ್:(ಅಂದಾಜು ₹554 ಕೋಟಿ)
ದಿವಂಗತ ಸಹಾರಾ ಗ್ರೂಪ್ ಮುಖ್ಯಸ್ಥ ಸುಬ್ರತಾ ರಾಯ್ ಅವರ ಪುತ್ರರಾದ ಸುಶಾಂತೋ ಮತ್ತು ಸೀಮಂತೋ ರಾಯ್ ಜೋಡಿಯ ಅದ್ಧೂರಿ ವಿವಾಹವು ಫೆಬ್ರವರಿ 10ರಿಂದ ಫೆಬ್ರವರಿ 14, 2004ರ ನಡುವೆ ನಡೆದಿತ್ತು. ಅಂದಾಜು ₹554 ಕೋಟಿ (75 ಮಿಲಿಯನ್ ಡಾಲರ್) ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಲಕ್ನೋದ ಸಹಾರಾ ಸ್ಟೇಡಿಯಂನಲ್ಲಿ ಡಬಲ್ ವೆಡ್ಡಿಂಗ್ ನಡೆಯಿತು. ಈ ಅದ್ಧೂರಿ ಸಮಾರಂಭದಲ್ಲಿ ಬಾಲಿವುಡ್ ತಾರೆಯರು ಮತ್ತು ಕ್ರೀಡಾ ಸಾಧಕರು ಸೇರಿದಂತೆ 11,000ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ ಒಂದು ವಾರದ ಮದುವೆ ಕಾರ್ಯಕ್ರಮದ ಆಚರಣೆಯನ್ನು ಒಳಗೊಂಡಿತ್ತು. ಪ್ರಪಂಚದಾದ್ಯಂತದ ಖಾಸಗಿ ಜೆಟ್‌ಗಳ ಮೂಲಕ ಅತಿಥಿಗಳು ಆಗಮಿಸಿದ್ದರು.
ಬ್ರಾಹ್ಮಣಿ ರೆಡ್ಡಿ ಮತ್ತು ರಾಜೀವ್ ರೆಡ್ಡಿ:(ಅಂದಾಜು ₹500 ಕೋಟಿ)
ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ರಾಜಕಾರಣಿ ಮತ್ತು ಕರ್ನಾಟಕ ಮೂಲದ ಗಣಿ ಉದ್ಯಮಿಯಾಗಿದ್ದು, ಅವರು ತಮ್ಮ ಮಗಳ ಮದುವೆಯನ್ನು 2016ರಲ್ಲಿ ಅದ್ಧೂರಿ ಮತ್ತು ಅತ್ಯಂತ ದುಬಾರಿ ವಿವಾಹವನ್ನು ಆಯೋಜಿಸಿದ್ದರು. ಅವರ ಏಕೈಕ ಪುತ್ರಿ ಬ್ರಹ್ಮಣಿಯಾಗಿದ್ದು, ಹೈದರಾಬಾದ್ ಮೂಲದ ಉದ್ಯಮಿ ವಿಕ್ರಮ್ ದೇವಾ ರೆಡ್ಡಿ ಅವರ ಪುತ್ರ ರಾಜೀವ್ ರೆಡ್ಡಿ ಅವರನ್ನು ವಿವಾಹವಾಗಿದ್ದರು. ನವೆಂಬರ್ 16, 2016 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಾಹವು ನಡೆಯಿತು. ಮದುವೆ ಸ್ಥಳವನ್ನು ವಿಜಯನಗರ ಸಾಮ್ರಾಜ್ಯದ ಮಹಾನ್ ರಾಜಧಾನಿಯಾದ ಹಂಪಿಯ ಅವಶೇಷಗಳನ್ನು ಹೋಲುವಂತೆ ರೆಡಿ ಮಾಡಲಾಗಿತ್ತು.
ಸೃಷ್ಟಿ ಮಿತ್ತಲ್ ಮತ್ತು ಗುಲ್ರಾಜ್ ಬೆಹ್ಲ್:(ಅಂದಾಜು ₹500 ಕೋಟಿ)
ಉಕ್ಕಿನ ಉದ್ಯಮಿ ಲಕ್ಷ್ಮಿ ಮಿತ್ತಲ್ ಅವರ ಕಿರಿಯ ಸಹೋದರ ಪ್ರಮೋದ್ ಮಿತ್ತಲ್ ಅವರು ಬಾರ್ಸಿಲೋನಾದಲ್ಲಿ ತಮ್ಮ ಮಗಳ ಮದುವೆಗೆ 70 ಮಿಲಿಯನ್ ಡಾಲರ್ ಯುರೋಗಳನ್ನು (ಸುಮಾರು ₹500 ಕೋಟಿ ರೂ.) ಖರ್ಚು ಮಾಡಿದ್ದಾರೆ ಎಂದು ವರದಿಯಾಗಿತ್ತು. ಪ್ರಮೋದ್ ಮಿತ್ತಲ್ ಅವರ ಪುತ್ರಿ ಸೃಷ್ಟಿ ಮಿತ್ತಲ್ ಅವರು ಲಂಡನ್ ಮೂಲದ HSBC ಹೂಡಿಕೆ ಬ್ಯಾಂಕರ್ ಗುಲ್ರಾಜ್ ಬೆಹ್ಲ್ ಅವರನ್ನು ಡಿಸೆಂಬರ್ 7, 2013 ರಂದು ವಿವಾಹವಾಗಿದ್ದರು.