ನವದೆಹಲಿ: ಶಾಲೆಗಳಲ್ಲಿ ಸಹಪಾಠಿಗಳೊಂದಿಗೆ ಬೆರೆತು, ಕಲಿತು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾದ ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.
ದೆಹಲಿಯ ಶಕಾರ್ಪುರ್ ಪ್ರದೇಶದಲ್ಲಿ ಸರ್ಕಾರಿ ಶಾಲೆ ಹೊರಗೆ 14 ವರ್ಷದ ವಿದ್ಯಾರ್ಥಿಯನ್ನು ಸಹಪಾಠಿಗಳ ಗುಂಪು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಶುಕ್ರವಾರ ಮಧ್ಯಾಹ್ನ ವಿದ್ಯಾರ್ಥಿಗಳ ಮಧ್ಯೆ ಶುರುವಾಗಿದ್ದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಸಾವನ್ನಪ್ಪಿದ ಬಾಲಕ ಮತ್ತು ಮತ್ತೊಬ್ಬ ವಿದ್ಯಾರ್ಥಿ ನಡುವೆ ವಾಗ್ವಾದ ಆರಂಭವಾಗಿತ್ತು. ಈ ವೇಳೆ ಮೂರ್ನಾಲ್ಕು ವಿದ್ಯಾರ್ಥಿಗಳು ಶಾಲಾ ಗೇಟ್ ಹೊರಗೆ ಸಂತ್ರಸ್ತ ಬಾಲಕನನ್ನು ಗುರಿಯಾಗಿಸಿ ಜಗಳ ಆರಂಭಿಸಿದ್ದು, ಇದರಲ್ಲಿ ಒಬ್ಬಾತ ಬಾಲಕನ ಬಲಗಾಲಿನ ತೊಡೆಗೆ ಬಲವಾಗಿ ಚಾಕುವಿನಿಂದ ಇರಿದಿದ್ದಾನೆ. ಇದರಿಂದ ಬಾಲಕನಿಗೆ ಗಂಭೀರ ಗಾಯವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.