ನವದೆಹಲಿ:ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದ್ದು, ಸಂಜೆ 5 ಗಂಟೆಯ ಹೊತ್ತಿಗೆ ಶೇ 57.70ರಷ್ಟು ಮತದಾನ ದಾಖಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಬೆಳಗ್ಗೆ 7ರಿಂದ ಆರಂಭವಾದ ಮತದಾನದಲ್ಲಿ ರಾಷ್ಟ್ರಪತಿ ಸೇರಿದಂತೆ ಆಪ್, ಬಿಜೆಪಿ ಹಾಗು ಕಾಂಗ್ರೆಸ್ ನಾಯಕರು ಮತದಾನ ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದಂತೆ ಮತದಾನ ಬಹುತೇಕ ಶಾಂತಿಯುತವಾಗಿ ಸಾಗುತ್ತಿದೆ.
ನಕಲಿ ಮತದಾನ ಆರೋಪ ಮಾಡಿದ ಬಿಜೆಪಿ: ದೆಹಲಿಯ ಸೀಲಾಂಪುರ್ ಮತ್ತು ಕಸ್ತುರ್ಬಾ ಕ್ಷೇತ್ರಗಳಲ್ಲಿ ನಕಲಿ ಮತದಾನವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕೆಲವರು ಬುರ್ಖಾ ಧರಿಸಿ ನಕಲಿ ಮತದಾನ ಮಾಡಲು ಯತ್ನಿಸಿದರು ಎಂದು ಬಿಜೆಪಿ ನಾಯಕರೊಬ್ಬರು ಆರೋಪಿಸಿದ ಬಳಿಕ ಹೈಡ್ರಾಮಾ ನಡೆಯಿತು. ಆದರೆ, ಈ ಕ್ಷೇತ್ರಗಳಲ್ಲಿ ನಕಲಿ ಮತದಾನ ಆಗಿರುವ ವಿಚಾರವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ.
ಕಸ್ತುರ್ಬಾ ಕ್ಷೇತ್ರದಲ್ಲಿ ನಕಲಿ ಮತದಾನಕ್ಕೆ ಯತ್ನ: ಆದರೆ ಕಸ್ತುರ್ಬಾ ನಗರದಲ್ಲಿ ಇಬ್ಬರು ನಕಲಿ ಮತದಾನಕ್ಕೆ ಯತ್ನಿಸಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಮತದಾರರಿಗೆ ಹಣ ಹಂಚಲಾಗಿದೆ-ಸಿಸೋಡಿಯಾ: ಈ ಮಧ್ಯೆ, ಗ್ರೇಟರ್ ಕೈಲಾಶ್ ಕ್ಷೇತ್ರದ ಆಪ್ ಸ್ಪರ್ಧಿ ಸೌರಭ್ ಭಾರಧ್ವಾಜ್ ಅವರು, ಚಿರಾಗ್ ದಿಲ್ಲಿ ಪ್ರದೇಶದಲ್ಲಿ ಜನ ಮತ ಹಾಕದಂತೆ ತಡೆಯೊಡ್ಡಲಾಗಿದೆ ಎಂದು ಆರೋಪಿಸಿದರು. ಅದೇ ರೀತಿ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ, ಜಂಗ್‌ಪುರದಲ್ಲಿ ಮತದಾರರಿಗೆ ಹಣ ಹಂಚಲಾಗಿದೆ ಎಂದು ದೂರಿದರು.
ಕೇಜ್ರಿವಾಲ್ ಮತದಾನ: ಆಮ್ ಆದ್ಮಿ ಪಕ್ಷದ ಸಂಚಾಲಕ ಹಾಗು ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಮತದಾನ ಮಾಡಿದ್ದು, ದೆಹಲಿಯ ಅಭಿವೃದ್ಧಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು. ತಮ್ಮ ಪೋಷಕರು ಮತ್ತು ಸಂಬಂಧಿಕರೊಂದಿಗೆ ಮತಗಟ್ಟೆಗೆ ಆಗಮಿಸಿ ವೋಟ್ ಮಾಡಿದರು.
ಉತ್ತಮ ಶಾಲೆಗಳು, ಆಸ್ಪತ್ರೆಗಳು ಮತ್ತು ನಗರದ ಅಭಿವೃದ್ಧಿಗೆ ಮತದಾನ ಮಾಡುವಂತೆ ಅವರು ಮತದಾರಲ್ಲಿ ಕೇಳಿಕೊಂಡರು. ಕೇಜ್ರಿವಾಲ್ ನವದೆಹಲಿ ಕ್ಷೇತ್ರದಿಂದ ಸತತ ನಾಲ್ಕನೇ ಬಾರಿಗೆ ಸ್ಪರ್ಧಿಸುತ್ತಿದ್ದು, ಈ ಬಾರಿ ಬಿಜೆಪಿಯ ಪರ್ವೆಶ್ ವರ್ಮಾ ಮತ್ತು ಕಾಂಗ್ರೆಸ್‌ನ ಸಂದೀಪ್ ದೀಕ್ಷಿತ್ ಎದುರು ಸ್ಪರ್ಧಿಸುತ್ತಿದ್ದಾರೆ.
ನನ್ನ ಪೋಷಕರಿಗೆ ಆರೋಗ್ಯ ಸಂಬಂಧಿ ಸಮಸ್ಯೆಗಳಿವೆ. ಹೀಗಿದ್ದರೂ ಬೆಳಗ್ಗೆಯಿಂದ ಮತದಾನದ ವಿಚಾರವಾಗಿ ಸಾಕಷ್ಚು ಉತ್ಸುಕರಾಗಿದ್ದಾರೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದರು. ಮತಗಟ್ಟೆಯಲ್ಲಿ ಪತ್ನಿ ಸುನಿತಾ ಕೇಜ್ರಿವಾಲ್ ಮತ್ತು ಪುತ್ರ ಪುಲ್ಕಿತ್ ಕೇಜ್ರಿವಾಲ್ ಕಾಣಿಸಿಕೊಂಡರು. ಇದೇ ವೇಳೆ, ಕೆಲಸ ಮಾಡುವವರಿಗೆ ಜನ ಮತ ಹಾಕುವ ನಂಬಿಕೆ ಇದೆ ಎಂದು ಹೇಳಿದರು.