ನವದೆಹಲಿ:ದೀಪಾವಳಿ ಹಬ್ಬ ಮುಗಿದ ಬಳಿಕವೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಸುಧಾರಿಸಿಲ್ಲ. ಸತತ 11ನೇ ದಿನವಾದ ಇಂದೂ ಕೂಡಾ ನಗರದಲ್ಲಿ ದಟ್ಟ ಹೊಗೆ ಕವಿದಿದೆ. ವಾಯುಮಾಲಿನ್ಯ ಅಪಾಯಕಾರಿ ಮಟ್ಟ ತಲುಪಿದ್ದು, ಕಳಪೆ ವರ್ಗದಲ್ಲಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ದತ್ತಾಂಶದ ಪ್ರಕಾರ, ದೆಹಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 342 ತಲುಪಿದೆ. ಅತ್ಯಂತ ಕಳಪೆ ಮಟ್ಟದಲ್ಲಿ ಇದನ್ನು ವರ್ಗೀಕರಿಸಲಾಗಿದೆ.
ನಗರದ ಅನೇಕ ಪ್ರದೇಶಗಳಲ್ಲಿ ಎಕ್ಯೂಐ ಮಟ್ಟ ಕಳಪೆ ವರ್ಗದಲ್ಲೇ ಮುಂದುವರೆದಿದ್ದು ನಗರ, ವಾಯು ಮಾಲಿನ್ಯ ಬಿಕ್ಕಟ್ಟಿನ ಪರಿಣಾಮ ಹೊಂದಿರುವುದನ್ನು ಪ್ರತಿಬಿಂಬಿಸುತ್ತಿದೆ. ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಹಾಗೂ ಸಂಶೋಧನಾ ವ್ಯವಸ್ಥೆ (SAFAR-India) ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆಯ ಸಂದೇಶ ರವಾನಿಸಿದೆ.
ದೇಶದ ಪವಿತ್ರ ನದಿಗಳಲ್ಲಿ ಒಂದಾಗಿರುವ ಯಮುನಾ ವಾಯು ಮಾಲಿನ್ಯದ ಪರಿಣಾಮಕ್ಕೆ ಒಳಗಾಗಿದೆ. ಕಳೆದ ವಾರ ದೆಹಲಿ ಹೈಕೋರ್ಟ್, ಈ ನದಿಯಲ್ಲಿ ಅಪಾಯಕಾರಿ ಮಾಲಿನ್ಯಕಾರಕಗಳಿರುವ ಕಾರಣಕ್ಕೆ ಯಮುನಾ ತೀರದಲ್ಲಿ ಭಕ್ತರು ಛತ್ ಪೂಜೆ ಮಾಡುವುದನ್ನು ನಿರ್ಬಂಧಿಸಿತ್ತು.
ಈ ನದಿಯಲ್ಲಿ ಸ್ನಾನ ಮಾಡಿದರೆ ಅನಾರೋಗ್ಯಕ್ಕೆ ಒಳಗಾಗುತ್ತೀರಿ ಅರ್ಥೈಸಿಕೊಳ್ಳಿ ಎಂದು ಕೋರ್ಟ್ ಗಂಭೀರ ಎಚ್ಚರಿಕೆ ನೀಡಿತ್ತು. ಕಲುಷಿತ ನೀರಿನಿಂದ ಉಂಟಾಗುವ ಆರೋಗ್ಯ ಅಪಾಯಗಳ ಕುರಿತು ತಿಳಿಸಿತ್ತು. ಯಮುನಾ ನದಿ ನೀರಿನಲ್ಲಿ ಮುಳುಗೇಳಲು ಸಾಧ್ಯವಾಗದಂತಹ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಸರ್ಕಾರ ಛತ್ ಪೂಜೆಗಾಗಿ ನಗರದ 1000 ಕಡೆ ಪರ್ಯಾಯ ವ್ಯವಸ್ಥೆ ಮಾಡಿದೆ ಎಂದು ತಿಳಿಸಿತ್ತು.
ಈ ಎಚ್ಚರಿಕೆಯ ನಡುವೆಯೂ ಸಾವಿರಾರು ಮಂದಿ ಯಮುನಾ ನದಿಯಲ್ಲಿ ಛತ್ ಪೂಜೆ ನಡೆಸಿ, ವಿಷಕಾರಿ ನೀರಿನಲ್ಲಿಯೇ ಮುಳುಗಿ ಧಾರ್ಮಿಕ ವಿಧಿವಿಧಾನ ನಡೆಸಿದ್ದಾರೆ. ನದಿಗೆ ರಾಸಾಯನಿಕ ತ್ಯಾಜ್ಯ ಹೊರಬಿಡುತ್ತಿರುವ ಪರಿಣಾಮ ಬಿಳಿ ನೊರೆ ಉಂಟಾಗಿದ್ದು, ಸಾಕಷ್ಚು ವಿಡಿಯೋಗಳು ವೈರಲ್ ಆಗಿವೆ.