ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಮಾತಿನ ಸಮರ ಮುಂದುವರೆದಿದೆ. ಈಗ ಮತ್ತೆ, ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರವೇಶ್ ವರ್ಮಾ ಅವರು ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕೇಜ್ರಿವಾಲ್ ಅವರ ಬೆಂಗಾವಲು ವಾಹನದ ಮೇಲಿನ ದಾಳಿ ಕುರಿತು ಪ್ರತಿಕ್ರಿಯಿಸಿ, ''ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜನರು ಕಪ್ಪು ಬಾವುಟಗಳನ್ನು ತೋರಿಸಿ, ಉದ್ಯೋಗ ಹಾಗೂ ಮತ್ತಿತರ ಸಮಸ್ಯೆಗಳಿಗೆ ಉತ್ತರ ನೀಡುವಂತೆ ಕೇಳುತ್ತಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
''ಕೇಜ್ರಿವಾಲ್ ಅವರು ಹೋದಲ್ಲೆಲ್ಲಾ ಜನರು ಕಪ್ಪು ಬಾವುಟ ತೋರಿಸಿ ಉತ್ತರಕ್ಕಾಗಿ ಆಗ್ರಹಿಸುತ್ತಿದ್ದಾರೆ. ಅವರೆಲ್ಲರೂ ಗೂಂಡಾಗಳಾಗಿದ್ದರೆ, ದೆಹಲಿಯ ಜನರೆಲ್ಲರೂ ಗೂಂಡಾಗಳು ಎಂದಾಗುತ್ತದೆ. ಯಾಕೆಂದರೆ ದೆಹಲಿಯ ಎಲ್ಲ ಜನರೂ ಕೇಜ್ರಿವಾಲ್ ಅವರನ್ನು ಪ್ರಶ್ನಿಸುತ್ತಿದ್ದಾರೆ. ಈ ಬಾರಿ ಕೇಜ್ರಿವಾಲ್ ಠೇವಣಿ ಕಳೆದುಕೊಳ್ಳುತ್ತಾರೆ'' ಎಂದು ಹೇಳಿದ್ದಾರೆ.
''ವಾಲ್ಮೀಕಿ ಸಮುದಾಯದ ಮೂವರು ಯುವಕರು ಕೇಜ್ರಿವಾಲ್ ಅವರನ್ನು ಉದ್ಯೋಗದ ಬಗ್ಗೆ ಕೇಳಿ ತಪ್ಪು ಮಾಡಿದ್ದಾರೆ. ಯಾರಾದರೂ ಕೇಜ್ರಿವಾಲ್ ಅವರನ್ನು ಕೇಳಿದರೆ, ಆಪ್ ಕಾರ್ಯಕರ್ತರು ಅವರನ್ನು ಥಳಿಸುತ್ತಾರೆ. ನಂತರ ಕೇಜ್ರಿವಾಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳುತ್ತಾರೆ. ಚುನಾವಣಾ ಆಯೋಗವಾಗಲಿ, ಪೊಲೀಸರಾಗಲಿ ಇದರ ಬಗ್ಗೆ ಗಮನ ಹರಿಸುತ್ತಿಲ್ಲ. ನಾನು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇನೆ. ಯುವಕರ ವಿರುದ್ಧ ಪೊಲೀಸರಿಗೂ ದೂರು ನೀಡಲಾಗುವುದು. ಕೊಲೆ ಯತ್ನ ಪ್ರಕರಣ ದಾಖಲಿಸಲಾಗುವುದು. ಕೇಜ್ರಿವಾಲ್ ಅವರನ್ನು ಬಂಧಿಸಬೇಕು, ಅವರ ಕಾರನ್ನು ವಶಪಡಿಸಿಕೊಳ್ಳಬೇಕು ಮತ್ತು ಅವರ ಚಾಲಕನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಬೇಕು'' ಎಂದು ಪ್ರವೇಶ್ ವರ್ಮಾ ಆಗ್ರಹಿಸಿದ್ದಾರೆ.
''ಸ್ಥಳೀಯ ಯುವಕರು ಕೇಜ್ರಿವಾಲ್ ಅವರನ್ನು ಪ್ರಶ್ನಿಸುವ ಧೈರ್ಯ ಮಾಡಿದ್ದರು. ಮತ್ತು ಕೇಜ್ರಿವಾಲ್ ಅವರನ್ನು ತಮ್ಮ ಕಾರಿನ ಕೆಳಗೆ ಹತ್ತಿಕ್ಕಲು ಸನ್ನೆ ಮಾಡಿದ್ದರು. ಅರವಿಂದ್ ಕೇಜ್ರಿವಾಲ್ ಈ ರೀತಿ ದಲಿತ ಸಮುದಾಯವನ್ನು ಹತ್ತಿಕ್ಕುತ್ತಾರೆಯೇ?'' ಎಂದು ವರ್ಮಾ ಪ್ರಶ್ನಿಸಿದರು.
ಏನಾಗಿತ್ತು?:ಅರವಿಂದ್ ಕೇಜ್ರಿವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕಾಗಿ ತೆರಳುತ್ತಿದ್ದಾಗ ಕೆಲವರು ಅವರಿಗೆ ಕಪ್ಪು ಬಾವುಟಗಳನ್ನು ತೋರಿಸಿ ಘೋಷಣೆಗಳನ್ನು ಕೂಗಿದ್ದರು. ಆಗ ಕೇಜ್ರಿವಾಲ್ ಅವರಿದ್ದ ಕಾರು ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದರು. ಈ ದಾಳಿಗೆ ಆಮ್ ಆದ್ಮಿ ಪಕ್ಷ ವರ್ಮಾ ಅವರ ಮೇಲೆ ಆರೋಪ ಮಾಡಿತ್ತು. ಪ್ರವೇಶ್ ವರ್ಮಾ ಅವರ ಗೂಂಡಾಗಳು ಕೇಜ್ರಿವಾಲ್ ಅವರ ಮೇಲೆ ದಾಳಿ ಮಾಡಿದ್ದಾರೆ. ಸೋಲಿನ ಭಯದಿಂದ ಬಿಜೆಪಿ ಭಯಭೀತವಾಗಿದೆ ಎಂದು ಆಪ್ ದೂರಿತ್ತು.
ಇದನ್ನೂ ಓದಿ:ದೆಹಲಿ ಚುನಾವಣೆ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಕಾರಿನ ಮೇಲೆ ಕಲ್ಲು ತೂರಾಟ