ಪೋರ್ಟ್ ಬ್ಲೇರ್ (ಅಂಡಮಾನ್ ಮತ್ತು ನಿಕೋಬಾರ್): ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸೊಂಪಾದ, ಹಚ್ಚ ಹಸಿರಿನ ಭೂದೃಶ್ಯಗಳ ಮಡಿಲಲ್ಲಿ, ಸಮುದ್ರವು ಆಕಾಶವನ್ನು ಚುಂಬಿಸುತ್ತಿರುವಂತೆ ಭಾಸವಾಗುತ್ತದೆ. ಸುಂದರವಾದ ಈ ಪ್ರಕೃತಿ ಮಡಿಲಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಇಲ್ಲಿನ ವನ್ಯಜೀವಿಗಳೊಂದಿಗೆ ಸಹಾನುಭೂತಿ ಮತ್ತು ಸಾಮರಸ್ಯದ ಲಾಂಛನವಾಗಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಲ್ಕನೇ ತಲೆಮಾರಿನ ನಿವಾಸಿ ಅನುರಾಧಾ ರಾವ್ ಅವರು ದ್ವೀಪದ ಜಿಂಕೆಗಳೊಂದಿಗೆ ಹೊಂದಿರುವ ಅಸಾಧಾರಣ ಬಂಧನದ ಕಾರಣದಿಂದಾಗಿ "ಜಿಂಕೆ ಮಹಿಳೆ" ಎಂಬ ಪ್ರೀತಿಯ ಬಿರುದು ಪಡೆದುಕೊಂಡಿದ್ದಾರೆ. ಜಿಂಕೆಗಳೊಂದಿಗೆ ಇವರ ಸಂಪರ್ಕವು ಕೇವಲ ಕ್ಷಣಿಕ ವಾತ್ಸಲ್ಯಕ್ಕಿಂತ ಹೆಚ್ಚಾಗಿ, ವರ್ಷಗಳ ತಾಳ್ಮೆ, ಸಮರ್ಪಣೆ ಮತ್ತು ದ್ವೀಪದ ನೈಸರ್ಗಿಕ ಲಯಗಳ ಬಗ್ಗೆ ಆಳವಾದ ತಿಳಿವಳಿಕೆಯ ಫಲಿತಾಂಶವಾಗಿದೆ.
ಚಿಕ್ಕಂದಿನಿಂದಲೇ ಜಿಂಕೆಗಳತ್ತ ಆಕರ್ಷಿತರಾಗಿದ್ದ ಅನುರಾಧಾ:ಸ್ವಾತಂತ್ರ್ಯಕ್ಕೂ ಮುನ್ನ ಅನುರಾಧಾ ಅವರ ತಂದೆ ಮತ್ತು ತಾಯಿಯ ಪೂರ್ವಜರನ್ನು ಈ ದ್ವೀಪದಲ್ಲಿ ಬಂದಿಗಳಾಗಿ ಇರಿಸಲಾಗಿತ್ತು. ನಂತರ ಚಿಕ್ಕ ಮಗುವಾಗಿದ್ದಾಗ ಅನುರಾಧಾ ತಮ್ಮ ತಂದೆ ಹಾಗೂ ತಾಯಿಯೊಂದಿಗೆ ಇಲ್ಲಿಗೆ ಬಂದಿದ್ದರು. ಆಗಿನಿಂದಲೂ ಅನುರಾಧಾ ಇಲ್ಲಿಯೇ ವಾಸವಾಗಿದ್ದಾರೆ.
ತನ್ನ ಆರಂಭಿಕ ದಿನಗಳಿಂದಲೂ, ರಾವ್ ದ್ವೀಪದಾದ್ಯಂತ ಮುಕ್ತವಾಗಿ ಸಂಚರಿಸುವ ಜಿಂಕೆಗಳತ್ತ ಆಕರ್ಷಿತರಾಗಿದ್ದರು. ನಂತರ ಅವುಗಳಿಗೆ ನಿತ್ಯ ಆಹಾರ ನೀಡುತ್ತ ಅವುಗಳೊಂದಿಗೆ ಆತ್ಮೀಯತೆ ಬೆಳೆಸಿಕೊಂಡರು.
"ನಾನು ಈ ದ್ವೀಪದ ನಾಲ್ಕನೇ ತಲೆಮಾರಿನ ನಿವಾಸಿ. ನನ್ನ ತಂದೆ ಮತ್ತು ತಾಯಿಯ ಪೂರ್ವಜರನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕೈದಿಗಳಾಗಿ ಅಂಡಮಾನ್ಗೆ ಕರೆತರಲಾಗಿತ್ತು. ನಾನು ಚಿಕ್ಕ ಮಗುವಾಗಿರುವಾಗಲೇ ಇಲ್ಲಿಗೆ ಬಂದಿದ್ದೆ. ಆಗಿನಿಂದಲೂ ನಾನು ಇಲ್ಲಿನ ಜಿಂಕೆಗಳಿಗೆ ಆಹಾರ ನೀಡುತ್ತಿದ್ದೇನೆ. ನಂತರ ಈ ದ್ವೀಪದ ಜಿಂಕೆಗಳೊಂದಿಗೆ ನನಗೆ ಉತ್ತಮ ಬಾಂಧವ್ಯ ಬೆಳೆಯಿತು" ಎಂದು ಅವರು ಹೇಳಿದರು.
ಜಿಂಕೆಗಳೊಂದಿಗೆ ಬಾಂಧವ್ಯ ಬೆಳೆದಿದ್ದು ಹೀಗೆ:ಅನುರಾಧಾ ಅವರು ಪ್ರಾಣಿಗಳ ಬಗ್ಗೆ ತೋರಿಸಿದ ಕೊಂಚ ಪ್ರೀತಿಯು ನಂತರದ ದಿನಗಳಲ್ಲಿ ಜಿಂಕೆ ಹಾಗೂ ಅವರ ಮಧ್ಯೆ ಅವಿನಾಭಾವ ಬಾಂಧವ್ಯ ಬೆಸೆಯಲು ಕಾರಣವಾಯಿತು. ಅನುರಾಧಾ ತಮ್ಮ ನಿರಂತರ ಪ್ರಯತ್ನಗಳ ಮೂಲಕ, ಮಾನವರು ಮತ್ತು ಪ್ರಾಣಿಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿರುವ ಅಷ್ಟೂ ಜಿಂಕೆಗಳ ಪೈಕಿ 17 ವರ್ಷ ವಯಸ್ಸಿನ ಎರಡು ಜಿಂಕೆಗಳು ಇವರೊಂದಿಗೆ ತೀರಾ ಅಪ್ಯಾಯಮಾನವಾಗಿರುವುದು ವಿಶೇಷ.
ಇಲ್ಲಿ ಜಿಂಕೆಗಳು ಮೊದಲಿನಂತೆ ಮನುಷ್ಯರನ್ನ ಕಂಡರೆ ಅಂಜುವುದಿಲ್ಲ:"ನನ್ನ ಈ ಎರಡು ಜಿಂಕೆಗಳು 17 ವರ್ಷ ವಯಸ್ಸಿನವು, ತಲಾ 70 ಮತ್ತು 75 ಕೆಜಿ ತೂಕವನ್ನು ಹೊಂದಿವೆ. ಕಳೆದ 25 ವರ್ಷಗಳಿಂದ, ಜಿಂಕೆಗಳ ವಿಶ್ವಾಸವನ್ನು ಗಳಿಸಲು, ಅವುಗಳೊಂದಿಗೆ ಸಮಯ ಕಳೆಯಲು, ಅವುಗಳಿಗೆ ಆಹಾರ ನೀಡಲು ಮತ್ತು ಅವುಗಳ ನಡವಳಿಕೆಗಳನ್ನು ಅರ್ಥಮಾಡಿಕೊಳ್ಳಲು ನಾನು ತಾಳ್ಮೆಯಿಂದ ಕೆಲಸ ಮಾಡಿದ್ದೇನೆ. ಇಂದು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜಿಂಕೆಗಳು ಮೊದಲಿನಂತೆ ಮನುಷ್ಯರಿಗೆ ಹೆದರುವುದಿಲ್ಲ" ಎಂದು ಅವರು ವಿವರಿಸಿದರು. (ani)
ಇದನ್ನೂ ಓದಿ : ಈ ದಿನಗಳಲ್ಲಿ ಕ್ಷೌರ ಮಾಡಬಾರದು: ಹಾಗಾದರೆ ಯಾವ ದಿನ ಉತ್ತಮ?, ಏನ್ ಹೇಳುತ್ತೆ ಜ್ಯೋತಿಷ್ಯ ಶಾಸ್ತ್ರ? - BEST DAYS FOR HAIR CUT AND SHAVING