ಅಮರಾವತಿ (ಆಂಧ್ರಪ್ರದೇಶ):ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು ಶೀಘ್ರದಲ್ಲೇ 21 ದಿನ ರಾಜ್ಯಾದ್ಯಂತ ಬಸ್ ಯಾತ್ರೆಯನ್ನು ಪ್ರಾರಂಭಿಸಲಿದ್ದಾರೆ ಎಂದು ವೈಎಸ್‌ಆರ್‌ಸಿಪಿ ಪಕ್ಷ ತಿಳಿಸಿದೆ. ಮಾರ್ಚ್ 26 ಅಥವಾ 27 ರಂದು ಯಾತ್ರೆ ಆರಂಭವಾಗಲಿದ್ದು, ಎಲ್ಲ ಸಂಸತ್ ಕ್ಷೇತ್ರಗಳ ಮೂಲಕ ಹಾದು ಹೋಗಲಿದೆ. ಇದರ ಮಾರ್ಗಸೂಚಿಯನ್ನು ಮಂಗಳವಾರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚಿಗೆ ಪಕ್ಷ ನಡೆಸಿದ ಸಿದ್ಧಂ (ಸಿದ್ಧ) ಸಭೆಗಳು ನಡೆದ ಜಿಲ್ಲೆಗಳಲ್ಲಿ ಈ ಯಾತ್ರೆ ಸಾಗಲಿದೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದಲ್ಲಿ ಮೇ 13 ರಂದು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಿಗದಿಯಾಗಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಎರಡನೇ ಬಾರಿಗೆ ಅಧಿಕಾರ ಹಿಡಿಯಲು ತಯಾರಿ ನಡೆಸುತ್ತಿರುವ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್‌ಸಿಪಿ, ಲೋಕಸಭೆ ಚುನಾವಣೆಯಲ್ಲೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಿದ್ಧತೆ ನಡೆಸುತ್ತಿದೆ.
ಇದರ ಭಾಗವಾಗಿ ಸಿಎಂ ಜಗನ್ ಜನರನ್ನು ತಲುಪಲು ಚುನಾವಣೆಗೂ ಮೊದಲು 'ಬಸ್ ಯಾತ್ರೆ'ಯನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ಬಸ್ ಪ್ರವಾಸದ ವೇಳೆ ಸಂವಾದ ಮತ್ತು ಸಾರ್ವಜನಿಕ ಸಭೆಗಳು ಇರಲಿವೆ. ಸಂವಾದದಲ್ಲಿ ಸರ್ಕಾರದ ಕಾರ್ಯಕ್ಷಮತೆಯನ್ನು ಇನ್ನಷ್ಟು ಸುಧಾರಿಸಲು ಜನರಿಂದ ಸಲಹೆಗಳನ್ನು ಸ್ವೀಕರಿಸಲಾಗುವುದು ಎಂದು ಸಿಎಂಒ ಸೋಮವಾರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.