ಚೆನ್ನೈ:ಕಳೆದೊಂದು ವಾರದಿಂದ ಭಾರತೀಯ ವಿಮಾನಗಳಿಗೆ ನಿರಂತರವಾಗಿ ಸಾಮಾಜಿಕ ಜಾಲತಾಣದ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬರತ್ತಿವೆ. ಒಂದು ವಾರದಿಂದ ದೇಶದೆಲ್ಲೆಡೆ ವಿವಿಧ ವಿಮಾನ ನಿಲ್ದಾಣ ಮತ್ತು ವಿಮಾನಯಾನ ಸಂಸ್ಥೆಗಳಿಗೆ ಒಟ್ಟಾರೆ 100 ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಇದು ದೇಶದಲ್ಲಿ ಆತಂಕ ಹೆಚ್ಚಿಸಿದೆ.
ಈ ನಿಟ್ಟಿನಲ್ಲಿ ಕೇಂದ್ರ ರಕ್ಷಣಾ ಇಲಾಖೆ ಮತ್ತು ಗೃಹ ಸಚಿವಾಲಯ ಬಾಂಬ್ ಬೆದರಿಕೆ ಸಂದೇಶಕರು, ಮತ್ತು ವಿಮಾನದ ಭದ್ರತೆ, ಪ್ರಯಾಣಿಕರ ಭದ್ರತೆ ಸಂಬಂಧ ಕಠಿಣ ಕ್ರಮಕ್ಕೂ ಮುಂದಾಗಿದೆ.
ಇದೀಗ ಚೆನ್ನೈನ ವಿಮಾನ ನಿಲ್ದಾಣಕ್ಕೆ ಸರಣಿ ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಳೆದ ಮೂರು ತಿಂಗಳಿನಿಂದ ಚೆನ್ನೈನ ವಿಮಾನ ನಿಲ್ದಾಣವೊಂದಕ್ಕೆ 24 ಬಾಂಬ್ ಬೆದರಿಕೆ ಕರೆಗಳು ಬಂದಿವೆ. ಅಕ್ಟೋಬರ್ 21ರಂದು ವಿಮಾನ ನಿಲ್ದಾಣದ ನಿರ್ದೇಶಕ ಅಧಿಕಾರಿಗಳಿಗೆ ಚೆನ್ನೈನ ವಿಮಾನ ನಿಲ್ದಾಣದ 5 ವಿಮಾನಗಳಿಗೆ ಬೆದರಿಕೆ ಸಂದೇಶ ಬಂದಿದೆ ಎಂಬ ಸಂದೇಶ ರವಾನೆಯಾಗಿದೆ.
ಇದರಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ಸ್ನಿಫರ್ ಶ್ವಾನಗಳು ವಿಮಾನ ನಿಲ್ದಾಣದೆಲ್ಲೆಡೆ ಶೋಧಕ್ಕೆ ಮುಂದಾಗಿದ್ದವು. ಆದರೆ, ಎಲ್ಲಿಯೂ ಬಾಂಬ್ ಪತ್ತೆಯಾಗಿಲ್ಲ. ಚೆನ್ನೈ ವಿಮಾನ ನಿಲ್ದಾಣ ಪೊಲೀಸರು ಸೈಬರ್ ಕ್ರೈಂ ಪೊಲೀಸರು, ನಾಗರಿಕ ವಿಮಾನಯಾನ ನಿರ್ದೆಶನಾಲಯವೂ ಕೂಡ ತನಿಖೆಗೆ ಮುಂದಾಗಿದೆ.
ಇನ್ನು, ಚೆನ್ನೈ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಯಾವ ರೀತಿ ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಕುರಿತು ಚೆನ್ನೈ ಏರ್ಪೋರ್ಟ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಅಧಿಕಾರಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.