ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಗಾಗಿ ಕಾನೂನು ಜಾರಿ ಮಾಡುವುದು ಸೇರಿದಂತೆ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರ ಶುಕ್ರವಾರ ಮಧ್ಯಾಹ್ನ ಚಂಡೀಗಢದಲ್ಲಿ ಪ್ರತಿಭಟನಾ ನಿರತ ರೈತರೊಂದಿಗೆ ಸಭೆ ನಡೆಸಲಿದೆ.
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಪಂಜಾಬ್ ಮತ್ತು ಹರಿಯಾಣ ನಡುವಿನ ಗಡಿ ಬಿಂದುವಾದ ಶಂಭುವಿನಲ್ಲಿ ರೈತರು ಕಳೆದ ಒಂದು ವರ್ಷದಿಂದ ಧರಣಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯ ಒಂದು ವರ್ಷದ ಅಂಗವಾಗಿ ಗುರುವಾರ ಶಂಭುವಿನಲ್ಲಿ ರೈತರು ಮಹಾ ಪಂಚಾಯತ್ ನಡೆಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡ ಸರ್ವನ್ ಸಿಂಗ್ ಪಂಧೇರ್, ರೈತರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರಕ್ಕೆ ಮನವರಿಕೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.
ಕಳೆದ ವರ್ಷದ ನವೆಂಬರ್ 26 ರಿಂದ ಖಾನೌರಿ ಗಡಿಯಲ್ಲಿ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಸಂಚಾಲಕ ದಲ್ಲೆವಾಲ್ ಅವರನ್ನು ಪ್ರತಿಭಟನಾ ಸ್ಥಳ ಖನೌರಿಯಿಂದ ಚಂಡೀಗಢಕ್ಕೆ ಆಂಬ್ಯುಲೆನ್ಸ್ ಮೂಲಕ ಮಾತುಕತೆಗಾಗಿ ಕರೆದೊಯ್ಯಲಾಗುವುದು. ಕೇಂದ್ರವು ರೈತರನ್ನು ಮಾತುಕತೆಗೆ ಆಹ್ವಾನಿಸಿದ ನಂತರ ಅವರು ವೈದ್ಯಕೀಯ ನೆರವು ಪಡೆಯಲು ಒಪ್ಪಿಕೊಂಡಿದ್ದಾರೆ.