ನವದೆಹಲಿ:ಕೇಂದ್ರ ಸಚಿವರ ಜೊತೆಗಿನ 6 ಗಂಟೆಗಳ ಮಾತುಕತೆ ವಿಫಲವಾಗಿದ್ದು, ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ 'ದೆಹಲಿ ಚಲೋ' ಹೋರಾಟ ಮುಂದುವರಿಯಲಿದೆ. ಇಂದು ರೈತ ಹೋರಾಟಗಾರರು ದೆಹಲಿಗೆ ಪ್ರವೇಶ ಮಾಡಲಿದ್ದಾರೆ ಎಂದು ರೈತಸಂಘಗಳು ತಿಳಿಸಿದ್ದರೆ, ಇದನ್ನು ಎದುರಿಸಲು ಪೊಲೀಸ್ ಪಡೆಗಳು ಸರ್ವಸನ್ನದ್ಧವಾಗಿವೆ.
ಚಂಡೀಗಢದಲ್ಲಿ ಸೋಮವಾರ ರಾತ್ರಿಯಿಂದ ಕೇಂದ್ರ ಸಚಿವರಾದ ಅರ್ಜುನ್ ಮುಂಡಾ, ಪಿಯೂಷ್ ಗೋಯಲ್ ಮತ್ತು ನಿತ್ಯಾನಂದ ರಾಯ್ ಅವರೊಂದಿಗೆ ರೈತ ಮುಖಂಡರು, 6 ಗಂಟೆಗಳ ಕಾಲ ಮಾತುಕತೆ ನಡೆಸಿದರು. ಪ್ರಮುಖ ಬೇಡಿಕೆಗಳಾದ ಎಂಎಸ್‌ಪಿಗೆ ಕಾನೂನು ಖಾತರಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಅನುಷ್ಠಾನ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ, ಈ ಹಿಂದಿನ ಹೋರಾಟದ ವೇಳೆ ರೈತರ ಮೇಲೆ ಹಾಕಲಾದ ಪ್ರಕರಣಗಳನ್ನು ಹಿಂಪಡೆಯುವುದು, ಲಖಿಂಪುರ ಖೇರಿ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಕುರಿತು ಯಾವುದೇ ಅಂತಿಮ ನಿರ್ಧಾರಗಳು ಹೊರಬೀಳದ ಹಿನ್ನೆಲೆಯಲ್ಲಿ ಮಾತುಕತೆ ವಿಫಲವಾಗಿದೆ.
ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ ರೈತ ಮುಖಂಡರೊಬ್ಬರು, ಕೇಂದ್ರ ಸರ್ಕಾರದ ಜೊತೆಗಿನ ಮಾತುಕತೆ ಫಲಪ್ರದವಾಗಿಲ್ಲ. ಹೀಗಾಗಿ ದೆಹಲಿ ಚಲೋ ಹೋರಾಟ ಮುಂದುವರಿಯಲಿದೆ. ಮಂಗಳವಾರ ರೈತ ಹೋರಾಟಗಾರರು ದೆಹಲಿ ಪ್ರವೇಶ ಮಾಡಲಿದ್ದಾರೆ. ಹೋರಾಟದ ಮೂಲಕವೇ ನಮ್ಮ ಬೇಡಿಕೆಗಳನ್ನು ಪರಿಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಸಭೆಯಲ್ಲಿ ಏನಾಯ್ತು?:ಕೇಂದ್ರ ಸಚಿವರು ಮತ್ತು ರೈತರ ಹೋರಾಟಗಾರರ ಮಧ್ಯೆ ನಡೆದ ಸಭೆಯಲ್ಲಿ ವಿದ್ಯುತ್ ಕಾಯಿದೆ 2020 ರದ್ದು, ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ಸಾವನ್ನಪ್ಪಿದ ರೈತರಿಗೆ ಪರಿಹಾರ, ರದ್ದಾದ ಕೃಷಿ ಕಾನೂನುಗಳ ವಿರುದ್ಧ ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ಮತ್ತು ರೈತರ ನಡುವೆ ಒಪ್ಪಂದಕ್ಕೆ ಬರಲಾಯಿತು.