ಮುಂಬೈ: ಈ ಘಟನೆ ತುಂಬಾ ಹಳೆಯದ್ದು, ಅಂದರೆ, 75-80 ವರ್ಷದ ಹಿಂದೆ ಪಶ್ಚಿಮ ಮುಂಬೈನ ದಾದರ್ ಕೇಂದ್ರ ರೈಲ್ವೆ ನಿಲ್ದಾಣದ ಹೊರಗೆ ಒಂದು ಶೆಡ್ ಅಂಗಡಿ ಇತ್ತು. ಪ್ರತಿದಿನ ಈ ಶಾಪಿನ ಮುಂದೆ ಬಂದು 16 ವರ್ಷದ ಬಾಲಕ ನಿಂತು ಅಂಗಡಿಯನ್ನೇ ದಿಟ್ಟಿಸುತ್ತಿದ್ದ. ಆತ ನಿಜವಾಗಲೂ ದಿಟ್ಟಿಸುತ್ತಿದ್ದದ್ದು ಹಾರ್ಮೋನಿಯಂ. ಕೆಲವೊಮ್ಮೆ ಅಂಗಡಿಯ ಮುಂದೆ ಹಾರ್ಮೋನಿಯಂ ಇದ್ದರೆ, ಕೆಲವೊಮ್ಮೆ ಒಳಗೆ. ಆದರೆ, ಈ ಬಾಲಕ ಅದು ಎಲ್ಲಿದ್ದರೂ ಹೋಗಿ ಒಮ್ಮೆ ನುಡಿಸಿ ಬರುತ್ತಿದ್ದ. ಇದು ಅತನ ದಿನಚರಿಯೂ ಆಗಿತ್ತು.
ಈ ಹಾರ್ಮೋನಿಯಂ ಇಷ್ಟವಾದರೂ ಕೊಳ್ಳುವ ಸಾಮರ್ಥ್ಯ ಆತನಿಗೆ ಮೀರಿದ್ದಾಗಿತ್ತು. ಇದು ಅಂಗಡಿ ಮಾಲೀಕನಿಗೆ ಅರ್ಥವಾಗಲು ಹೆಚ್ಚಿನ ಸಮಯ ತೆಗೆದುಕೊಳ್ಳಲಿಲ್ಲ. ಒಂದು ದಿನ ಆತ ಹುಡುಗನನ್ನು ಕರೆದು ಆಸಕ್ತಿಯಿಂದ ಮಾತನಾಡಲು ಶುರು ಮಾಡಿದ. ಬಾಲಕ ಕೂಡ ತನ್ನಲ್ಲಿದ್ದ ಧೈರ್ಯವನ್ನೆಲ್ಲಾ ಒಟ್ಟಾಗಿ ನನಗೆ ಹಾರ್ಮೋನಿಯಂ ಅಂದರೆ ಇಷ್ಟ ಎಂದ. ಅಲ್ಲದೇ, ಅದನ್ನು ಕೊಳ್ಳಲು ತಾನು ಅಸಹಾಯಕ. ನನ್ನ ಬಳಿ ಅಷ್ಟು ಹಣವಿಲ್ಲ ಎಂದು ಉಸಿರಿದ.
ಸಂಗೀತದ ಬಗ್ಗೆ ಬಾಲಕನಿಗಿದ್ದ ಆಸಕ್ತಿ ಕಂಡ ಅಂಗಡಿ ಮಾಲೀಕ ಹಾರ್ಮೋನಿಯಂ ಅನ್ನು ನೀಡಲು ಮುಂದಾದರು. ಅಂದಿಗೆ 40 ರೂ. ಬೆಲೆ ಬಾಳುವ ಹಾರ್ಮೋನಿಯಂಗೆ ನಿನ್ನ ಬಳಿ ಎಷ್ಟು ಹಣವಿದ್ಯೋ ಅಷ್ಟು ಕೊಡು ಸಾಕು ಎಂದು ಹೇಳಿ ಹಾರ್ಮೋನಿಯಂ ಕೈಗಿತ್ತರು.
ಈ 16ರ ಬಾಲಕ ಬಳಿಕ ಹಿಂದಿ ಚಿತ್ರರಂಗದಲ್ಲಿ ಪ್ರಖ್ಯಾತ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡ. ಹಿಂದಿ ಚಿತ್ರರಂಗದಲ್ಲಿ ಸುವರ್ಣ ಸಂಗೀತ ಕಾಲ ಸೃಷ್ಟಿಸಿದ ಈತ ಒಂದರ ಹಿಂದೆ ಒಂದು ಸುಮಧುರ ಹಾಡುಗಳನ್ನು ಸೃಷ್ಟಿ ಮಾಡಿದರು.
ವೈಜಯಂತಿಮಾಲ ನಟನೆಯ ದೊ ಹನ್ಸೊ ಕ ಜೊಡಾ ದಂತಹ ಸುಮಧುರ ಗಾಯನವಿರಲಿ, ದಿಲೀಪ್ ಕುಮಾರ್ ಹಾಡಿದ ‘ಮಧುಬನ್ ಮೇ ರಾಧಿಕಾ ನಾಚೆ’ ಶಾಸ್ತ್ರೀಯ ಗೀತೆಯಾಗಲಿ.. ಅದರಲ್ಲೂ ಇಂದಿಗೂ ಜನಪ್ರಿಯವಾಗಿರುವ ‘ನನ್ಹ ಮುನ್ನಾ ರಾಹಿ ಹೂಂ’ ಹಾಡಿನ ಸಂಗೀತ ನಿರ್ದೇಶಕರಾದರು. ಅವರೇ ನೌಶಾದ್ ಅಲಿ. ಪದ್ಮಭೂಷಣ ಪ್ರಶಸ್ತಿಗೆ ಭಾಜನರಾದ ಅಲಿ ಅವರು ತಮಗೆ ಹಾರ್ಮೊನಿಯಂ ನೀಡಿದ ಅಂಗಡಿ ಮಾಲೀಕನನ ಹೆಸರಲ್ಲಿ ಒಂದು ಸಂಗೀತ ಸಂಸ್ಥೆ ಸ್ಥಾಪಿಸಿದರು. ಅದುವೇ ಹರಿಭಾವು ವಿಶ್ವನಾಥ್ ಸಂಗೀತ ಸಂಸ್ಥೆ.
ಈ ಸಂಸ್ಥೆಗೆ ಇದೀಗ ಶತಮಾನದ ಸಂಭ್ರಮ. ಇದು ಭಾರತದ ಸಂಗೀತ ಜಗತ್ತಿನ ಹಲವು ಬದಲಾವಣೆಗೆ ಕಾರಣವೂ ಆಯಿತು. 1925ರಲ್ಲಿ ಪಶ್ಚಿಮ ದಾದರ್ನಲ್ಲಿ ಪೇಪರ್ ಶೆಡ್ನಲ್ಲಿ ಆರಂಭವಾದ ಹರಿಭಾವು ವಿಶ್ವನಾಥ ಮ್ಯೂಸಿಕಲ್ ಭಾರತದ ಸಂಗೀತ ಪರಂಪರೆಯ ಶತಮಾನದ ಇತಿಹಾಸವಾಗಿ ಉಳಿದಿದೆ.