ನವದೆಹಲಿ: ಸಿಬಿಎಸ್ಇಯ 10 ಮತ್ತು 12ನೇ ತರಗತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಸೋಮವಾರ ನಿರಾಕರಿಸಿದೆ. ಇಂಥ ಆರೋಪಗಳು ಆಧಾರರಹಿತವಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಭೀತಿಯನ್ನು ಸೃಷ್ಟಿಸುವ ಪ್ರಯತ್ನವಾಗಿವೆ ಎಂದು ಅದು ಹೇಳಿದೆ.
ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು ಶನಿವಾರ ಪ್ರಾರಂಭವಾಗಿದ್ದು, ಭಾರತ ಮತ್ತು ವಿದೇಶಗಳಲ್ಲಿನ 7,800 ಕ್ಕೂ ಹೆಚ್ಚು ಕೇಂದ್ರಗಳಲ್ಲಿ 42 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. ಮಂಡಳಿಯ ಅಧಿಕಾರಿಗಳ ಪ್ರಕಾರ, ಒಟ್ಟು 24.12 ಲಕ್ಷ 10 ನೇ ತರಗತಿ ವಿದ್ಯಾರ್ಥಿಗಳು 84 ವಿಷಯಗಳಲ್ಲಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರೆ, 17.88 ಲಕ್ಷಕ್ಕೂ ಹೆಚ್ಚು 12 ನೇ ತರಗತಿ ವಿದ್ಯಾರ್ಥಿಗಳು 120 ವಿಷಯಗಳಲ್ಲಿ ಪರೀಕ್ಷೆಗಳಿಗೆ ಹಾಜರಾಗುತ್ತಿದ್ದಾರೆ.
"ಕೆಲವೊಂದು ದುಷ್ಟ ಶಕ್ತಿಗಳು ಯೂಟ್ಯೂಬ್, ಫೇಸ್ ಬುಕ್, ಎಕ್ಸ್ (ಹಿಂದೆ ಟ್ವಿಟರ್) ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ವದಂತಿಗಳನ್ನು ಹರಡುತ್ತಿವೆ ಎಂಬುದು ಮಂಡಳಿಯ ಗಮನಕ್ಕೆ ಬಂದಿದೆ. ಈ ಹೇಳಿಕೆಗಳು ಆಧಾರರಹಿತ ಮತ್ತು ಅನಗತ್ಯ ಭೀತಿಯನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿವೆ" ಎಂದು ಸಿಬಿಎಸ್ಇ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಸುಗಮ ಮತ್ತು ನ್ಯಾಯಸಮ್ಮತ ಪರೀಕ್ಷಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಮಂಡಳಿ ಭರವಸೆ ನೀಡಿದೆ. ಇಂತಹ ತಪ್ಪು ಮಾಹಿತಿ ಹರಡುವಿಕೆಯ ವಿರುದ್ಧ ಅದು ಎಚ್ಚರಿಕೆ ನೀಡಿದ್ದು, ಅಂಥ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಕಂಡು ಬಂದ ವಿದ್ಯಾರ್ಥಿಗಳ ವಿರುದ್ಧ ಸಿಬಿಎಸ್ಇಯ ನಿಯಮಗಳು ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಕಾನೂನುಗಳ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.