ಹೈದರಾಬಾದ್(ತೆಲಂಗಾಣ):ಬಿಆರ್‌ಎಸ್ ಪಕ್ಷದ ಶಾಸಕ ಪಿ.ಕೌಶಿಕ್ ರೆಡ್ಡಿ ಅವರ ಬಂಧನದ ಬೆನ್ನಲ್ಲೇ ಮಾಜಿ ಸಿಎಂ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಪುತ್ರ ಕೆ.ಟಿ.ರಾಮರಾವ್ ಮತ್ತು ಇವರ ಸೋದರಳಿಯ ಟಿ.ಹರೀಶ್ ರಾವ್ ಅವರನ್ನು ಇಂದು ಪೊಲೀಸರು ಗೃಹಬಂಧನದಲ್ಲಿರಿಸಿದ್ದಾರೆ.
ಮಾಜಿ ಸಚಿವರಾದ ರಾಮರಾವ್ ಹಾಗೂ ಹರೀಶ್ ರಾವ್ ಅವರನ್ನು ಹೈದರಾಬಾದ್ನ ಅವರ ನಿವಾಸದಲ್ಲಿ ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಬಿಆರ್‌ಎಸ್ ತಿಳಿಸಿದೆ.
ಏನಿದು ಪ್ರಕರಣ?: ಜನವರಿ 12ರಂದು ಕರೀಂ ನಗರದಲ್ಲಿ ನಡೆದ ಜಿಲ್ಲಾ ಪರಿಶೀಲನಾ ಸಮಿತಿ ಸಭೆಯಲ್ಲಿ ಜಗ್ತಿಯಾಲ್ ಶಾಸಕ ಸಂಜಯ್ ಕುಮಾರ್ ಅವರನ್ನು ನಿಂದಿಸಿದ ಆರೋಪದ ಮೇಲೆ ಹುಜೂರಾಬಾದ್ ಕ್ಷೇತ್ರದ ಬಿಆರ್‌ಎಸ್ ಶಾಸಕ ಕೌಶಿಕ್ ರೆಡ್ಡಿ ಅವರನ್ನು ಸೋಮವಾರ ಬಂಧಿಸಲಾಗಿದೆ. ಪರಿಶೀಲನಾ ಸಮಿತಿ ಸಭೆಯಲ್ಲಿ ಕೌಶಿಕ್ ರೆಡ್ಡಿ ಮತ್ತು ಸಂಜಯ್ ಕುಮಾರ್ ನಡುವೆ ತೀವ್ರ ವಾಗ್ವಾದ ನಡೆದ ನಂತರ ಅವರ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿವೆ. ಸಂಜಯ್ ಕುಮಾರ್ ಅವರ ಪಕ್ಷಾಂತರದ ಬಗ್ಗೆ ಕೌಶಿಕ್ ರೆಡ್ಡಿ ಪ್ರಶ್ನೆ ಎತ್ತಿದ್ದು, ಕೂಡಲೇ ಅಲ್ಲೇ ಇದ್ದ ಸಂಜಯ್ ಕುಮಾರ್ ಹಾಗೂ ಕೌಶಿಕ್ ರೆಡ್ಡಿ ನಡುವೆ ಮಾತಿನ ಚಕಮಕಿ ನಡೆಯಿತು.