ಕರ್ನಾಟಕ

karnataka

ETV Bharat / bharat

'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ - Hamare Baarah Movie - HAMARE BAARAH MOVIE

ಮುಸ್ಲಿಂ ಸಮುದಾಯದ ಆಕ್ಷೇಪಕ್ಕೆ ಕಾರಣವಾಗಿದ್ದ 'ಹಮಾರೆ ಬಾರಾ' ಸಿನಿಮಾ ಕೊನೆಗೂ ಚಿತ್ರಮಂದಿರಗಳಿಗೆ ಬರಲು ಸಜ್ಜಾಗಿದೆ. ಸಿನಿಮಾ ಬಿಡುಗಡೆಗೆ ಬಾಂಬೆ ಹೈಕೋರ್ಟ್​ ಅನುಮತಿ ನೀಡಿದೆ.

ಹಮಾರೆ ಬಾರಾ ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಅನುಮತಿ
ಹಮಾರೆ ಬಾರಾ ಸಿನಿಮಾ ಪೋಸ್ಟರ್ (ETV Bharat)

By PTI

Published : Jun 19, 2024, 4:27 PM IST

ಮುಂಬೈ(ಮಹಾರಾಷ್ಟ್ರ):ಇಸ್ಲಾಮಿಕ್ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಬಿಂಬಿಸಲಾಗಿದೆ ಎಂಬ ಆಕ್ಷೇಪಣೆಗಳಿಗೆ ತುತ್ತಾಗಿದ್ದ 'ಹಮಾರೆ ಬಾರಾ' ಸಿನಿಮಾ ಇದೀಗ ತೆರೆಗೆ ಬರಲು ಸಜ್ಜಾಗಿದೆ. ಸಿನಿಮಾದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ಕೈಬಿಡಲು ಸಿನಿಮಾ ನಿರ್ದೇಶಕರು ಒಪ್ಪಿದ್ದು, ಚಿತ್ರದ ರಿಲೀಸ್​ಗೆ ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ.

ಕುರಾನ್, ಇಸ್ಲಾಮಿಕ್ ನಂಬಿಕೆಗಳನ್ನು ಉಲ್ಲಂಘಿಸಿದೆ. ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ ಎಂದು ಆರೋಪಿಸಿ ಬಾಂಬೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಸುಪ್ರೀಂ ಕೋರ್ಟ್​ಗೂ ಸಿನಿಮಾ ಬಿಡುಗಡೆ ತಡೆಗೆ ಕೋರಲಾಗಿತ್ತು. ಇದರಿಂದ ಸಿನಿಮಾಗೆ ತಡೆಯಾಜ್ಞೆ ನೀಡಲಾಗಿತ್ತು.

ಇದೀಗ, ಇರುವ ಆಕ್ಷೇಪಗಳನ್ನು ಸಿನಿಮಾದಿಂದ ಕೈಬಿಟ್ಟು, ಜೂನ್ 21ರಂದು ತೆರೆಗೆ ಬರುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಚಿತ್ರವನ್ನು ಜೂನ್ 7ರಂದು ಬಿಡುಗಡೆಗೆ ಯೋಜಿಸಲಾಗಿತ್ತು. ಬಳಿಕ ಅದು ಜೂನ್ 14ಕ್ಕೆ ಮುಂದೂಡಲಾಗಿತ್ತು. ಆ ದಿನದಂದು ಸಿನಿಮಾಗೆ ತಡೆ ತರಲಾಗಿತ್ತು.

ಆಕ್ಷೇಪಣೆಗಳಿಗೆ ಕತ್ತರಿ ಹಾಕಲು ಒಪ್ಪಿಗೆ:ಸಿನಿಮಾ ಬಿಡುಗಡೆಗೆ ನಿಷೇಧ ಹೇರಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. ನ್ಯಾಯಮೂರ್ತಿಗಳಾದ ಬಿ.ಪಿ.ಕೊಲಬಾವಾಲಾ ಮತ್ತು ಫಿರ್ದೋಶ್ ಪೂನಿವಾಲಾ ಅವರಿದ್ದ ವಿಭಾಗೀಯ ಪೀಠವು ಸಿನಿಮಾವನ್ನು ವೀಕ್ಷಿಸಿತು. ಬಳಿಕ ಕೆಲವು ಬದಲಾವಣೆಗಳನ್ನು ಸೂಚಿಸಿತು. ತಯಾರಕರು ಮತ್ತು ಅರ್ಜಿದಾರರು ಇದಕ್ಕೆ ಸಮ್ಮತಿಸಿದರು. ಇದರ ಅನುಸಾರ, ನಿರ್ಮಾಪಕರು ಬದಲಾವಣೆಗಳನ್ನು ಮಾಡಿ ನಂತರ ಚಲನಚಿತ್ರವನ್ನು ಬಿಡುಗಡೆ ಮಾಡಬಹುದು ಎಂದು ನ್ಯಾಯಾಲಯ ಹೇಳಿತು.

ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರ ಸೆನ್ಸಾರ್ ಬೋರ್ಡ್​ನಿಂದ ಪ್ರಮಾಣಪತ್ರವನ್ನು ಪಡೆಯಲಾಗುವುದು. ಜೂನ್ 21ರಂದು ಸಿನಿಮಾವನ್ನು ಬಿಡುಗಡೆ ಮಾಡಲು ಯೋಜಿಸಲಾಗುವುದು ಎಂದು ನಿರ್ಮಾಪಕರು ತಿಳಿಸಿದರು. ಇದಕ್ಕೆ ಒಪ್ಪಿದ ಕೋರ್ಟ್​, ಸೆನ್ಸಾರ್​​ ಬೋರ್ಡ್​ನಿಂದ ಪ್ರಮಾಣಪತ್ರ ಪಡೆಯುವ ಮೊದಲ ಟ್ರೈಲರ್​ ಬಿಡುಗಡೆ ಮಾಡಿದ್ದಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿತು.

ಸುಪ್ರೀಂ ಕೋರ್ಟ್​ ಹೇಳಿದ್ದೇನು?:ಸಿನಿಮಾ ಬಿಡುಗಡೆಗೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಿತ್ತು. ಹೈಕೋರ್ಟ್‌ನಲ್ಲಿ ಅರ್ಜಿ ಇತ್ಯರ್ಥವಾಗುವವರೆಗೆ ಚಲನಚಿತ್ರದ ಪ್ರದರ್ಶನ ಸ್ಥಗಿತಗೊಳಿಸಲಾಗುತ್ತದೆ. ಅರ್ಜಿಯನ್ನು ತ್ವರಿತವಾಗಿ ಇತ್ಯರ್ಥಪಡಿಸುವಂತೆ ನಾವು ಹೈಕೋರ್ಟ್‌ಗೆ ಸೂಚಿಸುತ್ತೇವೆ ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿತ್ತು. ಅಲ್ಲದೇ, ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿಗಳು, ''ಚಿತ್ರದ ಟೀಸರ್​ ವೀಕ್ಷಿಸಿದ್ದೇವೆ. ಇದರಲ್ಲಿ ಆಕ್ಷೇಪಾರ್ಹ ಸಂಗತಿಗಳಿವೆ" ಎಂದಿತ್ತು.

ಇದನ್ನೂ ಓದಿ:'ಹಮಾರೆ ಬಾರಾ' ಸಿನಿಮಾ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ - Hamare Baarah Movie

ABOUT THE AUTHOR

...view details