ಮಂಡಿ (ಹಿಮಾಚಲಪ್ರದೇಶ):ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆದಿರುವ ನಟಿ ಕಂಗನಾ ರಣಾವತ್ ತಮ್ಮ ಹುಟ್ಟೂರಾದ ಮಂಡಿ ಲೋಕಸಭಾ ಕ್ಷೇತ್ರದ ಭಂಬ್ಲಾ ಗ್ರಾಮದಲ್ಲಿ ಪಕ್ಷದ ಕಾರ್ಯಕರ್ತರು, ಸ್ಥಳೀಯರೊಂದಿಗೆ ಹೋಳಿ ಹಬ್ಬದ ಸಂಭ್ರಮಾಚರಣೆ ಮಾಡಿದರು.
ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಕ್ಷೇತ್ರಕ್ಕೆ ಬಂದ ನಟಿ, ಬಿಜೆಪಿ ಕಾರ್ಯಕರ್ತರು, ಜನರಿಗೆ ಹೋಳಿ ಶುಭಾಶಯ ಕೋರಿದರು. ಈ ವೇಳೆ, ಸರ್ಕಾಘಾಟ್‌ನ ಬಿಜೆಪಿ ಶಾಸಕ ದಿಲೀಪ್ ಠಾಕೂರ್ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.
ಮಂಡಿಯಿಂದ ಕಂಗನಾ ಬಿಜೆಪಿ ಅಭ್ಯರ್ಥಿ:2024ರ ಲೋಕಸಭೆ ಚುನಾವಣೆಗೆ ಬಿಜೆಪಿ 111 ಅಭ್ಯರ್ಥಿಗಳ 5ನೇ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಗಮನಾರ್ಹವಾಗಿ ಅದರಲ್ಲಿ ಕಂಗನಾ ರಣಾವತ್ ಅವರ ಹೆಸರೂ ಇದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಬಿಜೆಪಿ ಕಂಗನಾಗೆ ಟಿಕೆಟ್ ನೀಡಿದೆ. ನಟಿ ಕೂಡ ಮೂಲತಃ ಹಿಮಾಚಲದವರು. ಅವರ ಕುಟುಂಬ ಮಂಡಿ ಜಿಲ್ಲೆಯ ಭಂಬ್ಲಾ ಗ್ರಾಮದ ನಿವಾಸಿಗಳಾಗಿದ್ದಾರೆ. ಸದ್ಯ ಕುಲು ಜಿಲ್ಲೆಯ ಮನಾಲಿಯಲ್ಲಿ ಅವರ ಕುಟುಂಬವಿದೆ. ಮನಾಲಿ ಕೂಡ ಮಂಡಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಹುಟ್ಟುಹಬ್ಬದ ಉಡುಗೊರೆ:ಬಿಜೆಪಿಯ ಪರವಾಗಿ ವಾದಿಸುತ್ತಿದ್ದ ನಟಿ ಕಂಗನಾ, ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಮೋದಿ ಸರ್ಕಾರವನ್ನು ಬೆಂಬಲಿಸಿ, ವಿರೋಧ ಪಕ್ಷಗಳ ವಿರುದ್ಧ ಅವರು ಸಾಕಷ್ಟು ಹೇಳಿಕೆಗಳನ್ನು ನೀಡಿದ್ದಾರೆ. ಮಾರ್ಚ್ 23 ರಂದು ಕಂಗನಾ ಅವರು ಜನ್ಮದಿನ ಆಚರಿಸಿಕೊಂಡಿದ್ದು, ಒಂದು ದಿನದ ನಂತರ ಬಿಜೆಪಿ ಅವರಿಗೆ ಮಂಡಿಯಿಂದ ಲೋಕಸಭೆ ಟಿಕೆಟ್ ನೀಡಿ, ದೊಡ್ಡ ಉಡುಗೊರೆ ಕೊಟ್ಟಿದೆ.
ಬಾಲಿವುಡ್ ಕ್ವೀನ್ ಎಂದೇ ಕರೆಯಲ್ಪಡುವ ಕಂಗನಾ ಅವರು, ಸಿನಿಮಾ ಕ್ಷೇತ್ರದಲ್ಲಿನ ಸ್ವಜನಪಕ್ಷಪಾತ ಮತ್ತು ರಾಜಕೀಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಬಹಿರಂಗ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಿಂದಲೇ ಅವರು ಮಾಧ್ಯಮ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಹೆಸರುವಾಸಿಯಾಗಿದ್ದರು.
ನಟಿ ಕಂಗನಾ ಅವರು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಿಗೆ ದೇವಸ್ಥಾನದ ಟ್ರಸ್ಟ್ ವಿಶೇಷ ಆಹ್ವಾನ ನೀಡಿತ್ತು. ಕಳೆದ ವರ್ಷ ದ್ವಾರಕಾದಿಂದ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಪಕ್ಷ ಅವರಿಗೆ ಟಿಕೆಟ್ ನೀಡಿರಲಿಲ್ಲ. ಈ ಬಾರಿ ನಟಿಯನ್ನು ಪರಿಗಣಿಸಿರುವ ಪಕ್ಷ ಹಿಮಾಚಲಪ್ರದೇಶದ ಮಂಡಿಯಿಂದ ಕಣಕ್ಕೆ ಇಳಿಸಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ: ಬಿಜೆಪಿ ಐದನೇ ಪಟ್ಟಿ ಬಿಡುಗಡೆ; ಶೆಟ್ಟರ್, ಕಾಗೇರಿ, ಸುಧಾಕರ್ ಸೇರಿ ನಾಲ್ವರಿಗೆ ಟಿಕೆಟ್ - BJP FIFTH LIST