ಮುಂಬೈ (ಮಹಾರಾಷ್ಟ್ರ):ಮಹಿಳಾ ಬ್ಯಾಂಕ್ ಅಧಿಕಾರಿಯೊಬ್ಬರಿಗೆ ಸೈಬರ್ ಖದೀಮರು ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಭಾರತೀಯ ದಂಡ ಸಂಹಿತೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯ ವಿವಿಧ ಸೆಕ್ಷನ್ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಪಾರಿಜಾದ್ ಮಚ್ಲಿವಾಲಾ ಎಂಬುವರೇ ಹಣ ಕಳೆದುಕೊಂಡ ಮಹಿಳೆ. ಇಲ್ಲಿನ ಗೋರೆಗಾಂವ್‌ನಲ್ಲಿರುವ ಬ್ಯಾಂಕ್ವೊಂದರ ಹಿರಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 22 ರಂದು ಪಾರಿಜಾದ್ ಕಚೇರಿಯ ಸಭೆಯು ಆನ್‌ಲೈನ್‌ನಲ್ಲಿ ಕರೆಯಲಾಗಿತ್ತು. ಇದರಿಂದ ಮನೆಯಿಂದಲೇ ಕೆಲಸ ಮಾಡಲು ನಿರ್ಧರಿಸಿದ್ದರು. ಬೆಳಗ್ಗೆ ಬ್ಯಾಂಕ್ ಸಭೆ ಪಾಲ್ಗೊಂಡ ನಂತರ ಸುಮಾರು 9 ಗಂಟೆಗೆ ಕೊರಿಯರ್ ಕಂಪನಿ ಹೆಸರಲ್ಲಿ ಅಪರಿಚಿತ ಮೊಬೈಲ್ ಫೋನ್‌ನಿಂದ ಕರೆ ಬಂದಿದೆ. ನಿಮ್ಮ ಹೆಸರಿನಲ್ಲಿ ಕೊರಿಯರ್ ಬಂದಿದ್ದು, ಅದರಲ್ಲಿ ಕೆಲವು ದೋಷಗಳಿವೆ. ಇದರ ಬಗ್ಗೆ ವಿಚಾರಿಸಲು ಸಂಖ್ಯೆ ಒಂದನ್ನು ಒತ್ತಿರಿ ಎಂದು ಕರೆ ಮಾಡಿದವರು ಹೇಳಿದ್ದಾರೆ. ಅಂತೆಯೇ, ಪಾರಿಜಾದ್ ಸಂಖ್ಯೆ ಒಂದನ್ನು ಒತ್ತಿದಾಗ, ಆ ಕಡೆಯಿಂದ ಮಹಿ ಶರ್ಮಾ ಎಂಬ ಮಹಿಳೆ ಸಂಪರ್ಕಕ್ಕೆ ಬಂದಿದ್ದಾರೆ.
ಆಗ ಪಾರಿಜಾದ್ ಅವರಿಗೆ ಮಹಿ ಶರ್ಮಾ ನಿಮ್ಮ ಹೆಸರಲ್ಲಿ ಪಾರ್ಸೆಲ್ ಇದೆ ಎಂದು ಹೇಳಿದ್ದಾರೆ. ಇದಕ್ಕೆ ಪಾರಿಜಾದ್, ಯಾವ ಪಾರ್ಸೆಲ್?. ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಉತ್ತರಿಸಿದ್ದಾರೆ. ಈ ವೇಳೆ, ಮಹಿ ಶರ್ಮಾ ನೀವು ತೈವಾನ್‌ಗೆ ಕಳುಹಿಸಲು ಹೊರಟಿದ್ದ ಪಾರ್ಸೆಲ್ ನಮಗೆ ಬಂದಿದೆ. ಅದರಲ್ಲಿ ಅಕ್ರಮ ವಸ್ತುಗಳು ಕಂಡುಬಂದಿವೆ. ಈ ಪಾರ್ಸೆಲ್‌ನಲ್ಲಿ ಐದು ಪಾಸ್‌ಪೋರ್ಟ್‌ಗಳು, ಮೂರು ಕ್ರೆಡಿಟ್ ಕಾರ್ಡ್‌ಗಳು, 140 ಗ್ರಾಂ ಡ್ರಗ್ಸ್, ಬಟ್ಟೆ ಮತ್ತು ಲ್ಯಾಪ್‌ಟಾಪ್ ಇದೆ ಎಂದು ಮಹಿ ಶರ್ಮಾ ತಿಳಿಸಿದ್ದಾರೆ.