ಚಮೋಲಿ(ಉತ್ತರಾಖಂಡ): ಧಾರ್ಮಿಕ ಪೂಜಾ ಕೈಂಕರ್ಯಗಳು ಮತ್ತು ಮಂತ್ರಘೋಷಗಳೊಂದಿಗೆ ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರ ಬದರಿನಾಥ ಧಾಮ್ ಬಾಗಿಲುಗಳನ್ನು ಇಂದು ಬೆಳಗ್ಗೆ 6 ಗಂಟೆಯ ಶುಭಘಳಿಗೆಯಲ್ಲಿ ತೆರೆಯಲಾಯಿತು. ಸೇನಾ ಬ್ಯಾಂಡ್ನ ಇಂಪಾದ ಸಂಗೀತ ಹಾಗೂ ಭಕ್ತರ ಜೈಕಾರದ ಝೇಂಕಾರವು ತಂಪಾದ ಮುಂಜಾವಿನಲ್ಲಿ ರಿಂಗಣಿಸಿದವು.
ಬದರಿನಾಥನ ದರ್ಶನಕ್ಕೆ ಬೆಳಗ್ಗೆಯೇ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇಂದಿನಿಂದ ಮುಂದಿನ ಆರು ತಿಂಗಳ ಕಾಲ ಭಕ್ತರಿಗೆ ದರ್ಶನಾವಕಾಶ ಸಿಗಲಿದೆ.
ಮೇ 10ರಂದು 3 ಧಾಮ್ಗಳ ಬಾಗಿಲು ಓಪನ್: ದೇಶದ ಪ್ರಮುಖ ಚಾರ್‌ಧಾಮಗಳಾದ ಗಂಗೋತ್ರಿ, ಯಮುನೋತ್ರಿ ಮತ್ತು ಕೇದಾರನಾಥ ಧಾಮದ ಬಾಗಿಲುಗಳನ್ನು ಮೇ 10ರಂದು ತೆರೆಯಲಾಗಿದೆ. ಬದರಿನಾಥ ಕ್ಷೇತ್ರವನ್ನು ಭೂವೈಕುಂಠ ಧಾಮ ಎಂದೂ ಕರೆಯುತ್ತಾರೆ. ಈ ಧಾಮವು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯ ಅಲಕನಂದಾ ನದಿ ದಡದಲ್ಲಿದೆ. ಇದು ಹಿಂದೂಗಳ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದ್ದು, ವಿಷ್ಣುವಿಗೆ ಸಮರ್ಪಿತವಾಗಿದೆ.