ನವದೆಹಲಿ: ಅಸ್ಸಾಂನ ಅಹೋಂ ರಾಜಮನೆತದ ದಿಬ್ಬದ ಸಮಾಧಿ ವ್ಯವಸ್ಥೆ 'ಮೊಯಿದಮ್ಸ್' ಇದೀಗ ಯುನೆಸ್ಕೋನ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಈ ಮೂಲಕ ಸಾಂಸ್ಕೃತಿಕ ಪಾರಂಪರಿಕ ಪಟ್ಟಿಗೆ ಸೇರಿದ ಮೊದಲ ಈಶಾನ್ಯ ರಾಜ್ಯದ ತಾಣ ಎಂಬ ಹೆಗ್ಗಳಿಕೆಯನ್ನು ಇದು ಹೊಂದಲಿದೆ.
ಭಾರತದಲ್ಲಿ ವಿಶ್ವ ಪಾರಂಪರಿಕ ಸಮಿತಿ (ಡಬ್ಲ್ಯೂಎಚ್ಸಿ)ಯ 46ನೇ ಸಮ್ಮೇಳನ ನಡೆಯುತ್ತಿದ್ದು, ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ ಸ್ಥಳಗಳ ಹೆಸರು ಪ್ರಕಟಿಸಲಾಗಿದೆ. 2023-24ರಲ್ಲಿ ಮೊಯಿದಮ್ಸ್ ಅನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವಂತೆ ಭಾರತ ನಾಮನಿರ್ದೇಶನ ಮಾಡಿತ್ತು.
ಮೊಯಿದಮ್ಸ್ ವಿಶೇಷತೆ: ಪಿರಮಿಡ್ ರೀತಿಯ ಆಕೃತಿ ಹೊಂದಿರುವ ವಿಶಿಷ್ಠ ಸಮಾಧಿ ವ್ಯವಸ್ಥೆಯ ದಿಬ್ಬದ ಸ್ಥಳವಿದು. ಇದನ್ನು ತೈ ಅಹೋಮ್ ರಾಜಮನೆತ ಬಳಸುತ್ತಿದ್ದು, ಈ ಮನೆತನ ಅಸ್ಸಾಂನಲ್ಲಿ 600 ವರ್ಷಗಳ ಕಾಲ ಆಳ್ವಿಕೆ ನಡೆಸಿತ್ತು.
ಸ್ಥಾನ ಪಡೆದ ಇತರೆ ಸ್ಥಳಗಳು: ಇದರ ಜೊತೆಗೆ, ವಿಶ್ವದ ವಿವಿಧ ಪ್ರದೇಶಗಳನ್ನು ಈ ಪಟ್ಟಿಗೆ ಸೇರಿಸಲಾಗಿದೆ. ವಿಶೇಷವೆಂದರೆ ಯುದ್ಧ ಭೂಮಿ ಪ್ಯಾಲೆಸ್ಟೈನ್‌ನ ಸೈಂಟ್ ಹಿಲರಿಯನ್ ಮೊನೆಸ್ಟರಿ ಅಥವಾ ಟೆಲ್ ಉಮ್ ಅಮೆರ್ ಕೂಡ ಯುನೆಸ್ಕೋ ಪಟ್ಟಿ ಸೇರಿದೆ. ಈ ತಾಣವನ್ನು ವಿಶ್ವ ಪಾರಂಪರಿಕ ತಾಣ ಮತ್ತು ಅಪಾಯದಲ್ಲಿರುವ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರಿಸಲಾಗಿದೆ.