ಶ್ರೀನಗರ: ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಇಂದು ಕೇರನ್ ವಲಯದ ನಿಯಂತ್ರಣ ರೇಖೆಯ ಉದ್ದಕ್ಕೂ ಹರಡಿರುವ ಮುಂಚೂಣಿ ಯುದ್ಧ ಪ್ರದೇಶಗಳಿಗೆ ಭೇಟಿ ನೀಡಿದರು. ಜಮ್ಮುವಿನಲ್ಲಿ ನಡೆದ ಉಗ್ರರ ದಾಳಿ ಮತ್ತು ಕಾಶ್ಮೀರ ಕಣಿವೆಯ ಕುಪ್ವಾರಾ ಜಿಲ್ಲೆಯ ನಿಯಂತ್ರಣ ರೇಖೆಯ ಬಳಿ ಯೋಧನ ಹತ್ಯೆಯ ಘಟನೆಗಳ ಮಧ್ಯೆ ಸೇನಾ ಮುಖ್ಯಸ್ಥರು ಗಡಿಗೆ ಭೇಟಿ ನೀಡಿರುವುದು ಗಮನಾರ್ಹವಾಗಿದೆ. ಸೇನಾ ಮುಖ್ಯಸ್ಥರು ಇಂದು ಮುಂಜಾನೆ ಕಣಿವೆಗೆ ಆಗಮಿಸಿ ಎಲ್ಒಸಿ ಬಳಿಯ ಕುಪ್ವಾರಾದಲ್ಲಿ ನಡೆದ ಭಯೋತ್ಪಾದಕ ವಿರೋಧಿ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಸೈನಿಕನಿಗೆ ನಮನ ಸಲ್ಲಿಸಿದರು.
"ಜನರಲ್ ಉಪೇಂದ್ರ ದ್ವಿವೇದಿ ಸಿಒಎಎಸ್, ಚಿನಾರ್ ಕಾರ್ಪ್ಸ್ನ ಮುಂಚೂಣಿ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ನಿಯಂತ್ರಣ ರೇಖೆ ಉದ್ದಕ್ಕೂ ಭದ್ರತಾ ಪರಿಸ್ಥಿತಿ ಪರಿಶೀಲಿಸಿದರು. ಇಲ್ಲಿ ನಿಯೋಜಿತವಾಗಿರುವ ಕಮಾಂಡರ್ಗಳು ಮತ್ತು ಸೈನಿಕರೊಂದಿಗೆ ಅವರು ಸಂವಹನ ನಡೆಸಿದರು. ಶ್ರೇಷ್ಠ ವೃತ್ತಿಪರತೆ ಕಾಯ್ದುಕೊಂಡಿದ್ದಕ್ಕಾಗಿ ಜನರಲ್ ಉಪೇಂದ್ರ ದ್ವಿವೇದಿಯವರು ಎಲ್ಲಾ ಅಧಿಕಾರಿಗಳನ್ನು ಶ್ಲಾಘಿಸಿದರು ಮತ್ತು ಹೊಸ ಮಾದರಿಯ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ದೃಢವಾಗಿ ನಿಲ್ಲುವಂತೆ ಪ್ರೇರೇಪಿಸಿದರು" ಎಂದು ಭಾರತೀಯ ಸೇನೆಯ ಸಾರ್ವಜನಿಕ ಮಾಹಿತಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕರು (ಎಡಿಜಿಪಿಐ) ಹೇಳಿದರು.
ಬೆಳಗ್ಗೆಯೇ ಆಗಮಿಸಿದ ದ್ವಿವೇದಿ:ಸೇನಾ ಮುಖ್ಯಸ್ಥರು ಇಂದು ಬೆಳಗ್ಗೆ ಬಾದಾಮಿ ಬಾಗ್ ಕಂಟೋನ್ಮೆಂಟ್ಗೆ ಬಂದಿಳಿದರು. ಕಣಿವೆಯ ಕುಪ್ವಾರಾ ಜಿಲ್ಲೆಯ ಲೋಲಾಬ್ ಪ್ರದೇಶದಲ್ಲಿ ಬುಧವಾರ ಭಯೋತ್ಪಾದಕರೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಹುತಾತ್ಮರಾದ ಸೇನಾಧಿಕಾರಿ ನಾಯಕ್ ದಿಲ್ವಾರ್ ಖಾನ್ ಅವರಿಗೆ ಸೇನಾ ಮುಖ್ಯಸ್ಥರು ಗೌರವ ನಮನ ಸಲ್ಲಿಸಿದರು.