ಪುರಿ (ಒಡಿಶಾ):ಇಲ್ಲಿನ ಖ್ಯಾತ ಜಗನ್ನಾಥ ದೇವಾಲಯದ ಖಜಾನೆಯನ್ನು (ರತ್ನ ಭಂಡಾರ) 46 ವರ್ಷಗಳ ನಂತರ ತೆರೆಯಲಾಗಿದ್ದು, ಐದು ಪೆಟ್ಟಿಗೆಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಚಿನ್ನ, ಬೆಳ್ಳಿ, ಇತರ ವಸ್ತುಗಳಿವೆ. ರತ್ನ ಭಂಡಾರದ ಬಾಗಿಲಿನ ಕೀಲಿ ಕಳೆದುಹೋದ ಕಾರಣ, ಬೀಗಗಳನ್ನು ಮುರಿದು ಬಾಗಿಲು ತೆರೆಯಲಾಗಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜಗನ್ನಾಥ ದೇವಸ್ಥಾನದ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧಿ ಅವರು, ಜುಲೈ 14 ರಂದು ಜಗನ್ನಾಥನ ರತ್ನ ಭಂಡಾರವನ್ನು ತೆರೆಯಲಾಗಿದೆ. ಐದು ಪೆಟ್ಟಿಗೆಗಳನ್ನು ಹೊರತರಲಾಗಿದೆ. ಅದರಲ್ಲಿನ ವಸ್ತುಗಳ ಲೆಕ್ಕಾಚಾರ ಹಾಕಿಲ್ಲ. ಸಮಯದ ಅಭಾವದ ಕಾರಣ ಅವುಗಳನ್ನು ಮುಂದೆ ಎಣಿಕೆ ಮಾಡಲಾಗುವುದು ಎಂದರು.
ತಾತ್ಕಾಲಿಕ ಲಾಕರ್‌ಗಳಿಗೆ ಸ್ಥಳಾಂತರ:ಕೀಲಿಗಳು ಕಳೆದುಹೋದ ಕಾರಣ, ಬಾಗಿಲಿನ ಬೀಗಗಳನ್ನು ಮುರಿಯಲಾಗಿದೆ. ನೇಮಿತ ವ್ಯಕ್ತಿಗಳು ಮಾತ್ರ ಖಜಾನೆಯನ್ನ ಪ್ರವೇಶಿಸಿದ್ದಾರೆ. ಹಾವು ಹಿಡಿಯುವವರು ಕೂಡ ಇದ್ದರು. ಕೆಲ ಹಾವುಗಳನ್ನು ಹಿಡಿಯಲಾಗಿದೆ. ರತ್ನ ಭಂಡಾರದ ಎಲ್ಲಾ ಆಭರಣಗಳನ್ನು ತಾತ್ಕಾಲಿಕ ಲಾಕರ್‌ಗಳಿಗೆ ಸ್ಥಳಾಂತರಿಸಲಾಗಿದೆ. ಒಳ ಭಾಗದಲ್ಲಿರುವ ಇನ್ನೊಂದು ಕೊಠಡಿಯಲ್ಲಿನ ಬಾಗಿಲುಗಳನ್ನು ತೆರೆದಿದ್ದರೂ, ಪೆಟ್ಟಿಗೆಗಳನ್ನು ಹೊರತರಲಾಗಿಲ್ಲ ಎಂದು ತಿಳಿಸಿದ್ದಾರೆ.
ಒಳಗಿನ ಕೊಠಡಿಯಲ್ಲಿರುವ ಆಭರಣಗಳನ್ನು ಯಾವಾಗ ಹೊರ ತರಬೇಕೆಂದು ಸಭೆ ನಡೆಸಿ ನಿರ್ಧರಿಸುತ್ತೇವೆ. ಈಗ ಹೊರತಂದ ಆಭರಣಗಳನ್ನು ಪುರಾತತ್ವ ಇಲಾಖೆಗೆ ಹಸ್ತಾಂತರಿಸಲಾಗುವುದು. ಎಎಸ್ಐ ರತ್ನಭಂಡಾರದ ನಿರ್ವಹಣೆಯನ್ನು ಪೂರ್ಣಗೊಳಿಸಿದ ನಂತರ, ಆಭರಣಗಳನ್ನು ತಾತ್ಕಾಲಿಕ ಸ್ಟ್ರಾಂಗ್ ರೂಂನಲ್ಲಿ ಇರಿಸಲಾಗುತ್ತದೆ. ಒಳ ಕೊಠಡಿಯ ಬಗ್ಗೆ ಮುಂದೆ ಯೋಚಿಸಲಾಗುವುದು ಎಂದರು.